ಸಿಸಿಟಿವಿ ಕ್ಯಾಮೆರಾ ಅಡಿಯಲ್ಲಿ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 25 2024, 12:47 AM IST

ಸಿಸಿಟಿವಿ ಕ್ಯಾಮೆರಾ ಅಡಿಯಲ್ಲಿ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಜಿಲ್ಲೆಯ 77 ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಸಿಸಿಟಿವಿ ಕ್ಯಾಮೆರಾ ಸ್ಟ್ರೀಮಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಹಾವೇರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಜಿಲ್ಲೆಯ 77 ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಸಿಸಿಟಿವಿ ಕ್ಯಾಮೆರಾ ಸ್ಟ್ರೀಮಿಂಗ್‌ ವ್ಯವಸ್ಥೆ ಮಾಡಲಾಗಿದೆ.ಈ ಸಲ ಉತ್ತಮ ಫಲಿತಾಂಶ ಬರಲು ಈಗಾಗಲೇ ಶಿಕ್ಷಕರು ಕಳೆದ ಕೆಲವು ತಿಂಗಳಿಂದ ಶ್ರಮಿಸಿದ್ದು, ವಿದ್ಯಾರ್ಥಿಗಳು ಕೂಡ ಈ ನಿಟ್ಟಿನಲ್ಲಿ ಪರೀಕ್ಷಾ ತಯಾರಿ ನಡೆಸಿದ್ದಾರೆ. ಮಾ.25ರಂದು ಪ್ರಥಮ ಭಾಷೆ ವಿಷಯದ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಅಣಿಯಾಗಿದ್ದಾರೆ. ಇಲಾಖೆ ಅಧಿಕಾರಿಗಳು ಭಯಮುಕ್ತ ಮತ್ತು ಪಾರದರ್ಶಕ ಪರೀಕ್ಷೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.ಜಿಲ್ಲೆಯ 77 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 24572 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ: ಜಿಲ್ಲೆಯ ಎಲ್ಲ 77 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿಯೇ ಕುಳಿತು ಎಲ್ಲ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಆ ಮೂಲಕ ಕಟ್ಟುನಿಟ್ಟಿನ ಪರೀಕ್ಷೆಗೆ ತಯಾರಿ ನಡೆಸಲಾಗಿದೆ.

ಮಧ್ಯಾಹ್ನ ಬಿಸಿಯೂಟ: ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿಯೇ ಬಿಸಿಯೂಟ ನೀಡಲು ತಯಾರಿ ನಡೆಸಲಾಗಿದೆ. ಜತೆಗೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಸನ ಸೇರಿದಂತೆ ಅಗತ್ಯ ಸಿದ್ಧತೆ ಪೂರ್ಣಗೊಳಿಸಲಾಗಿದೆ. ನಕಲು ಮುಕ್ತ ಪರೀಕ್ಷೆ ನಡೆಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ 2 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದ್ದು, ಪರೀಕ್ಷಾ ಉಸ್ತುವಾರಿ ಅಧಿಕಾರಿ ಜಿಲ್ಲಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ತಾಲೂಕು ಹಂತದಲ್ಲಿ ಕೂಡ ಸ್ಕ್ವಾಡ್‌ ರಚಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಪೊಲೀಸ್‌ ಸಿಬ್ಬಂದಿ ಕೂಡ ಇರಲಿದ್ದು, ಹೊರಗಿನ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಬಂದೋಬಸ್ತ್‌ನಲ್ಲಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ನಿರ್ಬಂಧ: ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶಿಸಿದ್ದಾರೆ.ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಬರುವ ಝರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಹಾಗೂ ಮೊಬೈಲ್ ಫೋಷನ್ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾ. ೨೫ರಿಂದ ಏ.೬ರ ವರೆಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಹಾಗೂ ಪರೀಕ್ಷೆ ಮುಗಿಸಿ ವಾಸ ಸ್ಥಳಕ್ಕೆ ಹಿಂದಿರುಗಲು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.ಸೋಮವಾರದಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಭಯಮುಕ್ತವಾಗಿ ಪರೀಕ್ಷೆ ಬರೆಯಬೇಕು. ಅಲ್ಲದೇ ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹಾವೇರಿ ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.