ನಾಳೆಯಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆ: ಜಿಲ್ಲಾಡಳಿತ ಸಜ್ಜು

| Published : Mar 24 2024, 01:30 AM IST

ನಾಳೆಯಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆ: ಜಿಲ್ಲಾಡಳಿತ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಕೊಠಡಿಗಳಿಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕಾರ್ಯಗಳ ವೀಕ್ಷಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲೆಯಲ್ಲಿ ಮಾ. 25ರಿಂದ ಏಪ್ರಿಲ್‌ 6ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿದ್ದು, 29,929 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 101 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಪಾರದರ್ಶಕವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಭಯ, ಆತಂಕ ಬಿಟ್ಟು ನಿರಾಂತಕವಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು ಡಿಡಿಪಿಐ ಮನವಿ ಮಾಡಿದ್ದಾರೆ.

ಪರೀಕ್ಷೆ ಕೇಂದ್ರಗಳ ವಿವರ:

ಹುಬ್ಬಳ್ಳಿ ಶಹರದ 34, ಧಾರವಾಡ ಶಹರದ 16, ಧಾರವಾಡ ಗ್ರಾಮೀಣದ 14, ಹುಬ್ಬಳ್ಳಿ ಗ್ರಾಮೀಣದ 13, ಕಲಘಟಗಿಯ 8 ಕುಂದಗೋಳದ 7 ನವಲಗುಂದದ 9 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು ಜಿಲ್ಲಾದ್ಯಂತ 101 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಡಿಡಿಪಿಐ ಎಸ್‌.ಎಸ್‌.ಕೆಳದಿಮಠ ತಿಳಿಸಿದ್ದಾರೆ.

ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಕೊಠಡಿಗಳಿಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕಾರ್ಯಗಳ ವೀಕ್ಷಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾ ಹಂತದಲ್ಲಿ ಜಿಪಂ ಸಿಇಒ ನಿರ್ದೇಶನದ ಮೇರೆಗೆ ಪ್ರತಿಯೊಂದು ತಾಲೂಕಿನ ಪರೀಕ್ಷಾ ಕೇಂದ್ರಗಳ ಪರೀಕ್ಷಾ ಕಾರ್ಯಗಳ ವೀಕ್ಷಣೆಗಾಗಿ ಉಪನಿರ್ದೇಶಕರ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಗ್ರೂಪ್ ಬಿ ವೃಂದದ ಅಧಿಕಾರಿಗಳನ್ನು ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನಾಗಿ ಜಿಲ್ಲಾಧಿಕಾರಿಗಳು ನೇಮಕ ಮಾಡಿ ಆದೇಶಿಸಿದ್ದಾರೆ.

ನಿಷೇಧಾಜ್ಞೆ:

ಪರೀಕ್ಷಾ ದಿನದಂದು ಜಿಲ್ಲಾಧಿಕಾರಿಗಳು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಪೊಲೀಸ್ ಆಯುಕ್ತರು ಸಿಆರ್‌ಪಿಸಿ ಸೆಕ್ಷನ್ 144ಕಲಂ ಅನ್ನು ಜಾರಿಗೊಳಿಸಿ ಪರೀಕ್ಷಾ ಕೇಂದ್ರಗಳ ಸುತ್ತ 200ಮೀ ಅಂತರದಲ್ಲಿನ ಝರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ದಿನದಂದು ಪ್ರತಿ ಪರೀಕ್ಷಾ ಕೇಂದ್ರಗೆ ದಾದಿಯರನ್ನು ನೇಮಕಾತಿ ಮಾಡಿದೆ. ಜಿಲ್ಲೆಯ ಹೆಸ್ಕಾಂಗೆ ಪರೀಕ್ಷಾ ದಿನದಂದು ವಿದ್ಯುತ್ ನಿಲುಗಡೆಯಾಗದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಜಿಲ್ಲಾ ಜಾಗೃತದಳದ 3 ತಂಡಗಳನ್ನು ನೇಮಕ ಮಾಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಹೋಳಿ ಹಬ್ಬದ ನಿಮಿತ್ತ ಹುಬ್ಬಳ್ಳಿಯ ಕೆಲವೊಂದು ಪ್ರದೇಶಗಳಲ್ಲಿ ಪರೀಕ್ಷಾ ದಿನಗಳಂದು ಬಣ್ಣದ ಹಬ್ಬ ಇರುವದರಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುವ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶ ಮತ್ತು ಇತರೆ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುವ ಮಕ್ಕಳು ಪ್ರವೇಶ ಪತ್ರವನ್ನು ತೋರಿಸಿ ಉಚಿತ ಪ್ರಯಾಣ ಮಾಡಲು ಹುಬ್ಬಳ್ಳಿಯ ವಾ.ಕ.ರಾ.ರ. ಸಂಸ್ಥೆ ಅವಕಾಶ ನೀಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ ತಿಳಿಸಿದ್ದಾರೆ.

ನಂಬರ್‌ ನಮೂದು:

ಪರೀಕ್ಷಾ ಕೇಂದ್ರಗಳನ್ನು ಶನಿವಾರವೇ ಸ್ವಚ್ಛಗೊಳಿಸಿ ಪರೀಕ್ಷಾರ್ಥಿಗಳ ನಂಬರ್‌ ನಮೂದು ಮಾಡಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ವ್ಯವಸ್ಥೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಬಗೆಯ ಅಕ್ರಮ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ರೂಢಿ ಪರೀಕ್ಷೆ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಅನುತ್ತೀರ್ಣರಾಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ರೂಢಿ ಪರೀಕ್ಷೆ ಎಂಬ ವಿನೂತನ ಪ್ರಯತ್ನವನ್ನು ಮಾಡಿದೆ. ಕಲಿಕೆಯಲ್ಲಿ ಹಿಂದುಳಿಯುತ್ತಿದ್ದ ಮಕ್ಕಳಿಗೆ ಕಳೆದ ನಾಲ್ಕೈದು ತಿಂಗಳಿಂದ ಪ್ರತಿನಿತ್ಯ ಪರೀಕ್ಷೆ ನಡೆಸುವ ಮೂಲಕ ಅವರಲ್ಲಿನ ಭಯ ಹಾಗೂ ಆತಂಕ ಹೋಗಲಾಡಿಸುವ ಪ್ರಯತ್ನ ಶಿಕ್ಷಣ ಇಲಾಖೆ ಮಾಡಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನಕ್ಕೆ ಕೈಹಾಕಿತ್ತು. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಸೋಮವಾರದ ಪರೀಕ್ಷೆಯ ದಿನ ಗೊತ್ತಾಗಲಿದೆ.ಅಗತ್ಯ ಕ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಏನೇನು ಬೇಕೋ ಆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಯಾವುದೇ ಕಾರಣಕ್ಕೂ ಆತಂಕ, ಭಯದಿಂದ ಮುಕ್ತವಾಗಿ ಪರೀಕ್ಷೆ ಎದುರಿಸಬೇಕು.

- ಎಸ್‌.ಎಸ್‌.ಕೆಳದಿಮಠ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ