ಎಸ್ಸೆಸ್ಸೆಲ್ಸಿ ಪರೀಕ್ಷೆ: ಭಯ ಬಿಟ್ಟು, ಹಬ್ಬದಂತೆ ಸಂಭ್ರಮಿಸಿ!

| Published : Feb 21 2025, 12:46 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಭಯ ಬಿಟ್ಟು, ಹಬ್ಬದಂತೆ ಸಂಭ್ರಮಿಸಿ!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನಕದಾಸ ಶಿಕ್ಷಣ ಸಮಿತಿ ಸಹಯೋಗದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯಬಿಡಿ; ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪರೀಕ್ಷೆಯನ್ನೇ ಹಬ್ಬದಂತೆ ಸಂಭ್ರಮಿಸಿ, ಆಗ ಯಶಸ್ಸು ತಾನಾಗಿಯೇ ನಿಮ್ಮದಾಗುತ್ತದೆ.

ಇದು ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನಕದಾಸ ಶಿಕ್ಷಣ ಸಮಿತಿ ಸಹಯೋಗದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ "ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ " ಕಾರ್ಯಾಗಾರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳು, ಗಣ್ಯರೆಲ್ಲ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತು.

ಇಲ್ಲಿನ ಕನಕದಾಸ ಶಿಕ್ಷಣ ಸಮಿತಿಯ ಸಭಾಂಗಣದಲ್ಲಿ ಬರೋಬ್ಬರಿ 4 ಗಂಟೆ ಕಾಲ ನಡೆದ ಕಾರ್ಯಾಗಾರ ಮಕ್ಕಳನ್ನು ಪರೀಕ್ಷೆಯ ಭಯದಿಂದ ಮುಕ್ತಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿ ಆಯಿತು. ಸಂಪನ್ಮೂಲ ವ್ಯಕ್ತಿಗಳು ಯಾವ ರೀತಿ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಏಕಾಗ್ರತೆ ಹೆಚ್ಚಿಸಿಕೊಳ್ಳುವ ಬಗೆ ಹೇಗೆ ಎಂಬ ಬಗ್ಗೆ ತಿಳಿಸಿದರೆ, ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಪ್ರಶ್ನೆಗಳ ಮೂಲಕ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡಿದ್ದು ವಿಶೇಷ.

ಸಮಾಜಿಕ ಜವಾಬ್ದಾರಿ

ಕಾರ್ಯಾಗಾರವನ್ನು ಉದ್ಘಾಟಿಸಿದ ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಳ ಮಾತನಾಡಿ, ಮಗುವಿನ ಭವಿಷ್ಯ ರೂಪಿಸುವ ಜವಾಬ್ದಾರಿ ಈ ಸಮಾಜದ ಮೇಲಿದೆ. ಮಕ್ಕಳಿಗೆ ಪಾಲಕರು ಸಂಸ್ಕಾರ ನೀಡಿದರೆ, ಶಿಕ್ಷಕರು ಸಂಸ್ಕೃತಿ ಕಲಿಸುತ್ತಾರೆ. ಈ ಸಮಾಜ ಹೇಗೆ ಜೀವನ ನಡೆಸಬೇಕು ಎಂಬ ಅರಿವು ಮೂಡಿಸುತ್ತದೆ. ಹಾಗಾಗಿ, ಒಂದು ಮಗುವಿನ ಏಳು-ಬೀಳಿನಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂದರು.

ಇಂದಿನ ಮಕ್ಕಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಶಿಕ್ಷಕರಾದವರು ಮಕ್ಕಳ ಮನದಾಳದ ವರೆಗೆ ಹೋಗಿ ಪಾಠ ಮಾಡಬೇಕು. ಈ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕಿದೆ. ತಂದೆ-ತಾಯಿಯು ಕಷ್ಟಪಟ್ಟು ಸಾಕಿ, ಸಲಹುತ್ತಿರುವ ಅರಿವು ಹೊಂದಿ ಶ್ರಮವಹಿಸಿ ಅಭ್ಯಸಿಸಿದರೆ ಜೀವನದಲ್ಲಿ ಸಾಧನೆಯ ಶಿಖರ ಏರಲು ಸಾಧ್ಯ ಎಂದರು.

ಯಾರು ಹೊಣೆಗಾರರು?

ಶಹರ ಬಿಇಒ ಚನ್ನಪ್ಪಗೌಡರ ಮಾತನಾಡಿ, ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಎನ್ನುವುದು ಜಿಲ್ಲೆಯ ಶೈಕ್ಷಣಿಕ ಮಾನದಂಡ ಅಳೆಯುವ ಕೇಂದ್ರವಾಗಿ ಮಾರ್ಪಟ್ಟಿದೆ. ವಿದ್ಯಾಕಾಶಿ ಎಂಬ ಕೀರ್ತಿಗೆ ಪಾತ್ರವಾಗಿರುವ ಧಾರವಾಡ ಜಿಲ್ಲೆಯು ಇಂದು 22ನೇ ಸ್ಥಾನಕ್ಕೆ ಕುಸಿಯುವ ಮೂಲಕ ಕಲಿಕೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ ಎಂದು ವಿಷಾಧಿಸಿದರು.

ಇಂದಿಗೂ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ. ಈ ಕುರಿತಂತೆ ಇತ್ತೀಚೆಗೆ ಕನ್ನಡಪ್ರಭ ಅಂಕಿ-ಸಂಖ್ಯೆಗಳ ಸಮೇತ ವಿಸ್ತೃತ ವರದಿ ಮಾಡಿತ್ತು. ಆ ವರದಿಯಲ್ಲಿನ ಎಲ್ಲ ಅಂಶಗಳು ಸತ್ಯವಾಗಿವೆ. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಯಾರು ಹೊಣೆಗಾರರು ಎಂಬ ವಿಶ್ಲೇಷಣೆ ಮಾಡುತ್ತ ಹೋದರೆ ಉತ್ತರ ದೊರೆಯುವುದಿಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಸರ್ಕಾರ, ಇಲಾಖೆ, ಶಿಕ್ಷಕರು, ವಿದ್ಯಾರ್ಥಿಗಳಷ್ಟೇ ಕಾರಣರಲ್ಲ, ನಾವೆಲ್ಲರೂ ಕಾರಣ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.

ಪ್ರಾಥಮಿಕ ಶಿಕ್ಷಣದ ಕುರಿತು ಇಲಾಖೆಯಿಂದ ಸರ್ವೇ ಮಾಡಿದ ವೇಳೆ ಶೇ. 57ರಷ್ಟು ಮಕ್ಕಳಿಗೆ ಓದಲು, ಬರೆಯಲು ಬರುವುದಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತು. ಇದನ್ನರಿತು ಕಳೆದ 3 ವರ್ಷಗಳಿಂದ ಹಲವು ಕಾರ್ಯಕ್ರಮಗಳ ಮೂಲಕ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಮಕ್ಕಳಲ್ಲಿ ಪರೀಕ್ಷೆ ಎಂಬ ಭಯ ಇರುವುದರಿಂದ ಹಲವರು ಅನುತ್ತೀರ್ಣರಾದರೆ, ಮತ್ತೆ ಕೆಲ ವಿದ್ಯಾರ್ಥಿಗಳು ನಿರೀಕ್ಷೆಯಂತೆ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಶಿಕ್ಷಣ ಇಲಾಖೆಯಿಂದಲೂ ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದಲೂ ಭಯಮುಕ್ತ ಪರೀಕ್ಷೆ ಬರೆಯಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಮಾಧ್ಯಮಗಳು ಕೈಜೋಡಿಸಿರುವುದು ಅಭಿನಂದನಾರ್ಹ ಎಂದು ಚೆನ್ನಪ್ಪಗೌಡರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಭಯ ಹೋಗಲಾಡಿಸೋಣ

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ವೇಳೆ ಎಲ್ಲ ಮಾಧ್ಯಮಗಳಲ್ಲಿ ರಾಜ್ಯಕ್ಕೆ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಹೆಸರು, ಜಿಲ್ಲೆಗಳ ಸ್ಥಾನಮಾನ, ಸಾಧಿಸಿದ ಶಾಲೆಗಳ ಕುರಿತು ಫೋಟೋ ಸಹಿತ ಮುಖಪುಟದಲ್ಲಿ ಸುದ್ದಿಗಳು ಪ್ರಕಟವಾಗಿರುತ್ತವೆ. ಅವುಗಳ ಜೊತೆಗೆ ಯಾವ ಜಿಲ್ಲೆ ಎಷ್ಟನೇ ಸ್ಥಾನಕ್ಕೇರಿತು, ಯಾವ ಜಿಲ್ಲೆಯ ಫಲಿತಾಂಶ ಕುಸಿಯಿತು, ಶಿಕ್ಷಕರ-ಅಧಿಕಾರಿಗಳ ನಿಷ್ಕ್ರೀಯತೆ, ಅನುತ್ತೀರ್ಣರಾದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ... ಹೀಗೆ ವಿವಿದ ಸುದ್ದಿಗಳೂ ಪ್ರಕಟವಾಗಿ ಇಡೀ ರಾಜ್ಯದ ಶೈಕ್ಷಣಿಕ ಸ್ಥಿತಿಗತಿಯನ್ನು ಜನತೆಯ ಎದುರು ತೆರೆದಿಟ್ಟಿರುತ್ತವೆ ಎಂದರು.

ಫಲಿತಾಂಶದ ಕುಸಿತಕ್ಕೆ ಕಾರಣ ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕರು ಎಂದು ಆರೋಪಿಸುವುದು ಸಹಜ. ಆದರೆ, ಸುಧಾರಣೆ ತರುವ ಹೊಣೆಗಾರಿಕೆ ನಮ್ಮ ಮೇಲೂ ಇರುತ್ತದೆ ಎಂಬುದನ್ನು ಮಾಧ್ಯಮಗಳು ಅರಿತುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಮತ್ತು ಶಿಸ್ತುಬದ್ಧ ಓದು ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಇಂಥ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ ಎಂದರು.

ವಿದ್ಯಾರ್ಥಿಗಳು ಆತ್ಮಸ್ಥೆರ್ಯದಿಂದ ಅಭ್ಯಾಸ ಮಾಡಿ, ಭಯಮುಕ್ತರಾಗಿ ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸುವ ಮೂಲಕ ನಿಮ್ಮ ತಂದೆ-ತಾಯಿ, ಕಲಿಸಿದ ಶಿಕ್ಷಕರ ಹೆಸರು ತರುವಂತೆ ಕರೆ ನೀಡಿದ ಅವರು, ಕಾರ್ಯಾಗಾರದಲ್ಲಿ ಪಾಲ್ಗೊಂಡವರಲ್ಲಿ ರಾಜ್ಯಕ್ಕೆ, ಜಿಲ್ಲೆಗೆ ಮೊದಲ ಹತ್ತರಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದು ಸಿದ್ದಣ್ಣವರ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಈ ವೇಳೆ ಬಿಇಡಿ ಕಾಲೇಜು ಪ್ರಾಚಾರ್ಯೆ ಎನ್.ಡಿ. ಶೇಖ್, ಡಾ. ರಾಜಕುಮಾರ, ಎಸ್‌.ವಿ. ಪಾಟೀಲ, ಕನ್ನಡಪ್ರಭದ ಸುದ್ದಿ ಸಂಪಾದಕ ಮಧುಕೇಶ್ವರ ಯಾಜಿ, ಉಪಸುದ್ದಿ ಸಂಪಾದಕ ಮಧುಕರ ಭಟ್, ಪ್ರಸರಣ ವಿಭಾಗದ ಮುಖ್ಯಸ್ಥ ಶ್ರೀಪಾದ ಕುಲಕರ್ಣಿ, ಜಾಹೀರಾತು ವಿಭಾಗದ ವ್ಯವಸ್ಥಾಪಕ ನಾಗರಾಜ ಇಟಗಿ ಸೇರಿದಂತೆ ಹಲವರಿದ್ದರು.

ಕನ್ನಡಪ್ರಭದ ವಿಶೇಷ ವರದಿಗಾರ ಶಿವಾನಂದ ಗೊಂಬಿ ಸ್ವಾಗತಿಸಿದರು. ಬಿಇಡಿ ವಿದ್ಯಾರ್ಥಿನಿ ಸಹನಾ ಪ್ರಾರ್ಥಿಸಿದರು. ನೇತ್ರಾ ಹೊಸಮನಿ, ವೀಣಾ ಕೆ.ಎಂ. ನಿರೂಪಿಸಿದರು. ಧಾರವಾಡ ಜಿಲ್ಲಾ ಪ್ರಧಾನ ವರದಿಗಾರ ಬಸವರಾಜ ಹಿರೇಮಠ ವಂದಿಸಿದರು.