ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಕೇಂದ್ರಗಳಲ್ಲೇ ಬಿಸಿಯೂಟ!

| Published : Mar 25 2024, 12:56 AM IST

ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಕೇಂದ್ರಗಳಲ್ಲೇ ಬಿಸಿಯೂಟ!
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ: ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ತಾಲೂಕಿನಲ್ಲಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ತಾಲೂಕಿನಲ್ಲಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹುಕ್ಕೇರಿ ತಾಲೂಕಿನಲ್ಲಿ 19 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 6880 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಎಲ್ಲ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದರೊಂದಿಗೆ ಸುರಕ್ಷಿತವಾಗಿ ಶುಚಿ ಮತ್ತು ರುಚಿಯಾಗಿ ಇರುವ ಬಿಸಿಯೂಟ ಸಿದ್ಧಪಡಿಸಿ ವಿತರಿಸಲು ತಾಲೂಕು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟ ವಿತರಣೆಯಾಗಲಿದೆ. ಮಧ್ಯಾಹ್ನದ ಬಿಸಿಯೂಟ ಸ್ವೀಕರಿಸಲು ಅಪೇಕ್ಷಿಸುವ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿದ್ಧಪಡಿಸಿ ವಿತರಿಸುವಂತೆ ಸೂಚಿಸಲಾಗಿದೆ.ಪರೀಕ್ಷಾ ಕೇಂದ್ರಗಳಿರುವ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಅಡುಗೆ ತಯಾರಿಸಿ ಬಡಿಸುವ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿ ಹಾಗೂ ಮೇಲ್ವಿಚಾರಕರಾಗಿ ವಿಷಯ ಬೋಧಕರಲ್ಲದ ದೈಹಿಕ ಶಿಕ್ಷಣ ಶಿಕ್ಷಕರು, ವೃತ್ತಿ ಶಿಕ್ಷಕರು ಇದ್ದಲ್ಲಿ ಒಬ್ಬರನ್ನು ನಿಯೋಜಿಸಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ, ಪರೀಕ್ಷಾ ಕೇಂದ್ರದ ಶಾಲಾ ಮುಖ್ಯಸ್ಥರಿಗೆ ಹಾಗೂ ಪರೀಕ್ಷಾ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕ ಸಿಬ್ಬಂದಿಗೆ ಹಲವು ಮಾರ್ಗಸೂಚಿ ಅನುಸರಿಸುವಂತೆ ಸೂಚಿಸಿದೆ.

ಏಪ್ತಿಲ್ 10ರ ವರೆಗೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿಯೂ ಸಹ 1 ರಿಂದ 10ನೇ ತರಗತಿವರೆಗೆ ಶಾಲಾ ಮಕ್ಕಳಿಗೆ ಬಿಸಿಯೂಟ ತಪ್ಪದೇ ಪೂರೈಕೆಯಾಗಲಿದೆ. ಜತೆಗೆ ಶಾಲಾ ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಬಿಸಿಯೂಟ ಆಹಾರದ ಉತ್ತಮ ಗುಣಮಟ್ಟ, ಸ್ವಚ್ಛತೆ ಮತ್ತು ನೈರ್ಮಲ್ಯ ಮತ್ತಿತರ ಅಂಶಗಳಿಗೆ ಶಾಲಾ ಮುಖ್ಯ ಶಿಕ್ಷಕರು, ನಿರ್ವಾಹಕರು ಹಾಗೂ ಅಡುಗೆ ಸಿಬ್ಬಂದಿಯವರು ಪ್ರಥಮ ಆದ್ಯತೆ ನೀಡಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಶಿಕ್ಷಣ ಇಲಾಖೆ ಸೂಚಿಸಿದೆ.

ಹುಕ್ಕೇರಿ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲ ಪರೀಕ್ಷಾರ್ಥಿಗಳಿಗೆ ಗುಣಮಟ್ಟದ ಬಿಸಿಯೂಟ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ತಿಳಿಸಿದ್ದಾರೆ.