ಇಂದಿನಿಂದ ಜಿಲ್ಲಾದ್ಯಂತ 98 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 25 2024, 12:53 AM IST

ಸಾರಾಂಶ

32,996 ವಿದ್ಯಾರ್ಥಿಗಳ ನೋಂದಣಿ. ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಕೆ. ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರವೇ ಬೇಸಿಕ್ ಮೊಬೈಲ್ ಮಾತ್ರ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರದಿಂದ ಆರಂಭಗೊಳ್ಳುತ್ತಿದ್ದು, ಬರುವ ಏ.4 ವರೆಗೆ ನಡೆಯಲಿರುವ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥಿತವಾಗಿ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ 98 ಪರೀಕ್ಷೆ ಕೇಂದ್ರದಲ್ಲಿ 32,996 ವಿದ್ಯಾರ್ಥಿಗಳು ಪರೀಕ್ಷೆ ಬರೆಯುಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ 98 ಪರೀಕ್ಷೆ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಇದರಲ್ಲಿ 93 ಸಾಮಾನ್ಯ ಪರೀಕ್ಷೆ ಕೇಂದ್ರಗಳು, 05 ಸೂಕ್ಷ್ಮ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ದೇವದುರ್ಗ 15, ಲಿಂಗಸೂಗೂರಿನಲ್ಲಿ 17 ಸಾಮಾನ್ಯ, 4 ಸೂಕ್ಷ್ಮ ಕೇಂದ್ರಗಳು, ಮಾನ್ವಿ 18,ರಾಯಚೂರು 24, ಸಿಂಧನೂರು 19 ಸಾಮಾನ್ಯ, 01 ಸೂಕ್ಷ್ಮ ಕೇಂದ್ರ ಪರೀಕ್ಷೆ ಕೇಂದ್ರಗಳು ಒಟ್ಟು 1347 ಕೊಠಡಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಒಂದು ಕೊಠಡಿಯಲ್ಲಿ 24 ವಿದ್ಯಾಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ ಒದಗಿಸಲಾಗಿದೆ.

ಪರೀಕ್ಷೆ ಬರೆಯಲಿರುವ ಒಟ್ಟು 32,996 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 32,996 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ದೇವದುರ್ಗದಲ್ಲಿ 4438, ಲಿಂಗಸೂಗೂರು 6550, ಮಾನ್ವಿ-6096, ರಾಯಚೂರು 9657, ಸಿಂಧನೂರಿನಲ್ಲಿ 6255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಪರೀಕ್ಷೆಗೆ ಜಿಲ್ಲೆಯಲ್ಲಿ 93 ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದ್ದು, 93 ಅಭೀಕ್ಷಕ ಅಧಿಕಾರಿಗಳು, 93 ಸ್ಥಾನಿಕ ಜಾಗೃತದಳದ ಅಧಿಕಾರಿಗಳು, 93 ಮೊಬೈಲ್ ಸ್ಕ್ವಾಡ್ ಅಧಿಕಾರಿಗಳು, 38 ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಕಲು ಮುಕ್ತ ಮಾಡಲು ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 1347 ಕೊಠಡಿಗಳ ಪೈಕಿ 818 ಕೊಠಡಿಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಇದರಲ್ಲಿ 27 ಶಾಲೆಯಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲಾಗಿದೆ.

ಅಧಿಕಾರಿಗಳ ತಂಡ ರಚನೆ: ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನಿರ್ವಹಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಖಜಾನೆ ಅಧಿಕಾರಿಗಳ ಮತ್ತು ಡಿಡಿಪಿಯು ಅಧಿಕಾರಿಗಳನ್ನೊಳಗೊಂಡಂತೆ ಅಧಿಕಾರಿಗಳ ತಂಡ ರಚಿಸಲಾಗಿದೆ. 40 ಮೀ. ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಲ್ಲಿರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್‌ಗಳನ್ನು ಮುಚ್ಚಿಸುವ ಆದೇಶ ಹೊರಡಿಸಲಾಗಿದೆ.

ಪರೀಕ್ಷಾ ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯ: ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಲು ಸೂಚನೆ ನೀಡಲಾಗಿದೆ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರವೇ ಬೇಸಿಕ್ ಮೊಬೈಲ್ ಮಾತ್ರ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ.