ಸಾರಾಂಶ
ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಸಕ್ತ ಸಾಲಿನ (2025-26) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡವೂ ಸೇರಿ ಪ್ರಥಮ ಭಾಷಾ ವಿಷಯಗಳಿಗೆ ವಿದ್ಯಾರ್ಥಿಗಳು 125 ಅಂಕಗಳಿಗೆ ಪರೀಕ್ಷೆ ಬರೆಯಬೇಕೇ? ಇಲ್ಲವೇ 100 ಅಂಕಗಳಿಗೆ ಬರೆಯಬೇಕೇ? ಎಂಬ ಬಗ್ಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉದ್ಭವಿಸಿದ ಗೊಂದಲಕ್ಕೆ ಸರ್ಕಾರ ಇನ್ನೂ ತೆರೆ ಎಳೆದಿಲ್ಲ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಪ್ರಥಮ ಭಾಷಾ ವಿಷಯಗಳ ಪರೀಕ್ಷೆಯನ್ನು 100 ಅಂಕಗಳಿಗೆ ಸೀಮಿತಗೊಳಿಸುವ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ನಿರ್ಧರಿಸುವುದಾಗಿ ಹೇಳಿದ್ದರು. ಆದರೆ, ಮಂಗಳವಾರ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿರುವ ಸುತ್ತೋಲೆಯಲ್ಲಿ ಕನ್ನಡ ಸೇರಿ ಎಲ್ಲ ಪ್ರಥಮ ಭಾಷಾ ವಿಷಯಗಳಿಗೂ 125 ಅಂಕಗಳಿಗೇ ಈ ಬಾರಿಯೂ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ. ಇದರಿಂದ 10ನೇ ತರಗತಿಯ ಏಳು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.ಪ್ರಥಮ ಭಾಷಾ ವಿಷಯಗಳಿಗೆ ಈವರೆಗೆ 125 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಇತರೆ ವಿಷಯಗಳಂತೆ 100 ಅಂಕಗಳಿಗೆ ಮಿತಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹಲವು ಸಾಹಿತಿಗಳು, ವಿವಿಧ ಶಿಕ್ಷಕ ತಜ್ಞರು, ಕನ್ನಡರ ಹೋರಾಟಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದಾಗಿ ಆರು ತಿಂಗಳೂ ಕಳೆದರೂ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗದೆ ವಿಳಂಬ ಅನುಸರಿಸುತ್ತಿದೆ. ಶೈಕ್ಷಣಿಕ ವರ್ಷ ಅರ್ಧ ಪೂರ್ಣಗೊಂಡು ಪರೀಕ್ಷಾ ದಿನಗಳು ಹತ್ತಿರವಾಗುತ್ತಿದ್ದರೂ ಸ್ಪಷ್ಟತೆ ಸಿಗದಿದ್ದರೆ ವಿದ್ಯಾರ್ಥಿಗಳು ಏನು ಮಾಡಬೇಕು ಎನ್ನುವುದು ಪೋಷಕರ ಪ್ರಶ್ನೆ.
ಇಲಾಖೆಯ ಉನ್ನತ ಅಧಿಕಾರಿಗಳ ಮಾಹಿತಿ ಪ್ರಕಾರ, ಕನ್ನಡ ಭಾಷಾ ವಿಷಯ ಪರೀಕ್ಷೆ ಅಂಕ ಬದಲಾವಣೆ ಅತ್ಯಂತ ಸೂಕ್ಷ್ಮ ವಿಚಾರ. ಅದರಲ್ಲೂ ಇದು ಕನ್ನಡ ರಾಜ್ಯೋತ್ಸವದ ಸಮಯ. ಹಾಗಾಗಿ ತರಾತುರಿಯಲ್ಲಿ ನಿರ್ಧಾರ ಮಾಡಲಾಗುವುದಿಲ್ಲ. ಈಗಾಗಲೇ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಸಾಹಿತಿಗಳು, ಶಿಕ್ಷಣ ತಜ್ಞರು, ಕನ್ನಡಪರ ಹೋರಾಟಗಾರರು ಸೇರಿ ಎಲ್ಲರೊಂದಿಗೆ ಚರ್ಚಿಸಿ ಒಮ್ಮತಕ್ಕೆ ತೆಗೆದುಕೊಂಡು ನಿರ್ಧಾರ ಮಾಡಬೇಕಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ವಿಳಂಬವಾಗುತ್ತಿದೆ ಎನ್ನುತ್ತಾರೆ.ಮಂಡಳಿ ಅಧಿಕಾರಿಗಳು ಹೇಳುವುದೇನು?
ಭಾಷಾ ವಿಷಯಗಳಿಗೂ ಇತರೆ ವಿಷಯಗಳಂತೆ 100 ಅಂಕಗಳಿಗೆ ಪರೀಕ್ಷೆ ಸೀಮಿತಗೊಳಿಸಲು ಸರ್ಕಾರಕ್ಕೆ ಕೆಲ ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಈವರೆಗೂ ಯಾವುದೇ ನಿರ್ಧಾರ ಆಗಿರುವ ಹಾಗೂ ಅದನ್ನು ಪಾಲಿಸು ಕುರಿತು ನಮಗೆ ನಿರ್ದೇಶನ ಬಂದಿಲ್ಲ. ಹಾಗಾಗಿ ಈವರೆಗೆ ಇದ್ದಂತೆ 125 ಅಂಕಗಳಿಗೇ ಪರೀಕ್ಷೆ ನಡೆಸುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಮುಂದೆ ಯಾವುದೇ ನಿರ್ಧಾರ ಆಗಿ ಆದೇಶ ಬಂದರೆ ಆ ಪ್ರಕಾರ ಪ್ರಥಮ ಭಾಷಾ ಪರೀಕ್ಷೆ ಅಂಕಗಳಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ವಿರೋಧ ಏಕೆ?
ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಆಂದೋಲನದ ಫಲವಾಗಿ ಕನ್ನಡ ಸೇರಿ ಪ್ರಥಮ ಭಾಷೆಗಳಿಗೆ 125 ಅಂಕಗಳಿಗೆ ಪರೀಕ್ಷೆ ನಡೆಸಲು ನಿರ್ಧಾರ ಮಾಡಿ ಜಾರಿಗೆ ತರಲಾಗಿತ್ತು. ಅಂತಹ ಐತಿಹಾಸಿಕ ನಿರ್ಧಾರ ಬದಲಾವಣೆ ಮಾಡುವುದು ಖಂಡನೀಯ. ಇಂಥ ಬದಲಾವಣೆಯ ಹಿಂದೆ ತರ್ಕವೂ ಇಲ್ಲ. ಹಾಗಾಗಿ ಹಾಲಿ ಇರುವಂತೆ 125 ಅಂಕಗಳಿಗೇ ಪ್ರಥಮ ಭಾಷಾ ಪರೀಕ್ಷೆ ನಡೆಸಬೇಕೆಂದು ಬರಗೂರು ರಾಮಚಂದ್ರಪ್ಪ ಅವರು ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು.ನಿರಂಜರಾರಾಧ್ಯ ಅವರು ಪಾಸ್ ಅಂಕ ಶೇ.33ಕ್ಕೆ ಇಳಿಸಿರುವುದು ಶಿಕ್ಷಣದ ಹಿಮ್ಮುಖ ಚಲನೆಯ ಮುನ್ಸೂಚನೆ. ಈ ನಿರ್ಧಾರ ರಾಜ್ಯವನ್ನು ಶೈಕ್ಷಣಿಕವಾಗಿ 200 ವರ್ಷಗಳ ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದ್ದರು. ಪ್ರಥಮ ಭಾಷಾ ಪರೀಕ್ಷೆಗಳ ಅಂಕಗಳನ್ನು 100ಕ್ಕೆ ಸೀಮಿತಗೊಳಿಸುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡಪರ ಸಂಘಟನೆಗಳ ಪ್ರಮುಖರು ಇದು ಕನ್ನಡದ ಬಗ್ಗೆ ಸರ್ಕಾರದ ನಿರ್ಲಕ್ಷ್ಯಧೋರಣೆ ಎಂದು ಕಿಡಿ ಕಾರಿದ್ದರು.
;Resize=(128,128))
;Resize=(128,128))
;Resize=(128,128))