ಎಸ್ಸೆಸ್ಸೆಲ್ಸಿ- ಕಳಪೆ ಸಾಧನೆ ತೋರಿದ ಶಾಲೆಗಳಿಗೆ ನೋಟಿಸ್‌

| Published : May 24 2025, 12:00 AM IST

ಸಾರಾಂಶ

ಶಿಕ್ಷಕ ವೃತ್ತಿ ಉಳಿದ ವೃತ್ತಿಗಳಿಗಿಂತ ಶ್ರೇಷ್ಠ. ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಆರು ಶಾಲೆಗಳು ಕಳೆದ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಮಾಡಿವೆ

ಧಾರವಾಡ: ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸಾಧನೆಯಲ್ಲಿ ಕಳಪೆ ಸಾಧನೆ ಮಾಡಿದ 106 ಶಾಲೆಗಳಿಗೆ ತಕ್ಷಣ ಶೋಕಾಸ್ ನೋಟಿಸ್ ನೀಡಲು ಜಿಪಂ ಸಿಇಓ ಭುವನೇಶ ಪಾಟೀಲ ಸೂಚಿಸಿದ್ದಾರೆ.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಮಾಡಿರುವ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿಸಿದ ಅವರು, ಶಿಕ್ಷಕ ವೃತ್ತಿ ಉಳಿದ ವೃತ್ತಿಗಳಿಗಿಂತ ಶ್ರೇಷ್ಠ. ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಆರು ಶಾಲೆಗಳು ಕಳೆದ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಮಾಡಿವೆ. ಇವುಗಳಲ್ಲಿ ಎರಡು ಅನುದಾನಿತ ಹಾಗೂ ನಾಲ್ಕು ಅನುದಾನರಹಿತ ಪ್ರೌಢಶಾಲೆಗಳು ಸೇರಿವೆ. ಶಾಲೆಯ ಒಂದು ಮಗುವನ್ನು ಪಾಸ್ ಮಾಡಿಸುವಷ್ಟು ಕಲಿಸದ ಶಿಕ್ಷಕರಿಗೆ, ಆ ಶಾಲೆಯ ಮುಖ್ಯಸ್ಥರಿಗೆ ನಾಚಿಕೆ ಆಗಬೇಕು. ನಿಮ್ಮ ಶಿಕ್ಷಕ ವೃತ್ತಿ ನಿಮಗೆ ಆತ್ಮತೃಪ್ತಿ ನೀಡಿದೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋಪಗೊಂಡರು.

ಶೂನ್ಯ ಸಾಧನೆ ಮಾಡಿದ ಶಾಲೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮತ್ತು ಅಲ್ಲಿನ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ವರ್ಗಾಯಿಸಲು ಕ್ರಮವಹಿಸಬೇಕು. ಈ ಕುರಿತು ನಿಷ್ಕಾಳಜಿ ತೋರಿದಲ್ಲಿ ಡಿಡಿಪಿಐ ಮತ್ತು ಸಂಬಂಧಿಸಿದ ಬಿಇಓ ವಿರುದ್ದ ಕ್ರಮಕ್ಕಾಗಿ ಇಲಾಖೆಗೆ ಶಿಫಾರಸ್ಸು ಮಾಡಲಾಗುತ್ತದೆ.

ಇಂದಿನ ಪರಿಶೀಲನಾ ಸಭೆಗೆ ಗೈರಾಗಿರುವ ಶೂನ್ಯ ಸಾಧನೆ ಮಾಡಿರುವ ಶಾಲೆಗಳ ಅನುಮತಿ ರದ್ದುಪಡಿಸಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಿರ್ದೇಶನ ನೀಡಿದರು.

ಶಾಲೆಗಳಿಗೆ ಅನಧಿಕೃತವಾಗಿ ಗೈರಾಗುವ, ನಿಗದಿತ ಸಮಯಕ್ಕೆ ಶಾಲೆಗೆ ಹೋಗದ ಮತ್ತು ಕಲಿಕೆಯಲ್ಲಿ ಪ್ರಗತಿ ಸಾಧಿಸದ ಶಿಕ್ಷಕರನ್ನು ಗುರುತಿಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶೈಕ್ಷಣಿಕ ಸುಧಾರಣೆಗಾಗಿ ವಿದ್ಯಾಕಾಶಿ ಮಿಷನ್ ಅಡಿ ಪ್ರಯತ್ನಿಸಿದರೂ ಸರಿಯಾದ ಸಾಧನೆಯಾಗಿಲ್ಲ. ಈ ಕಳಪೆ ಗುಣಮಟ್ಟದ ಸಾಧನೆಗೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಶಿಕ್ಷಕರು ಹೊಣೆ ಹೊರಬೇಕು. ಕೈತುಂಬ ಸಂಬಳ, ಸೌಲಭ್ಯಗಳನ್ನು ನೀಡಿದ್ದರೂ ತಪ್ಪು ಒಪ್ಪಿಕೊಳ್ಳದೇ ಸಣ್ಣಪುಟ್ಟ ಕಾರಣ ನೀಡಿ, ಸಮರ್ಥಿಸಿಕೊಳ್ಳುವದರಿಂದ ಯಾವ ಪ್ರಯೋಜನವಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಗಳಿಗೆ ಖಾರವಾಗಿ ನುಡಿದರು.

ಪ್ರತಿ ಶಿಕ್ಷಕನ ಕರ್ತವ್ಯಗಳ ಮೌಲ್ಯಮಾಪನ ಮಾಡುವ ಮತ್ತು ಗ್ರೇಡಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ. ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಹಾಗೂ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡುವ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೇ ನಿಷ್ಕಾಳಜಿ, ಕರ್ತವ್ಯ ಲೋಪ ಮಾಡುವ ಅಧಿಕಾರಿ ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಸತತವಾಗಿ ಕಡಿಮೆ ಫಲಿತಾಂಶ ಮಾಡುತ್ತಿರುವ ಶಾಲೆಗಳಿಗೆ ಅಧಿಕಾರಿಗಳಿಂದ ಅನಿರೀಕ್ಷತ ಭೇಟಿ, ಪರಿಶೀಲನೆಗೆ ಆದೇಶಿಸಿ ವರದಿ ಪಡೆಯಲಾಗುತ್ತದೆ ಎಂದರು.

ಡಿಡಿಪಿಐ ಎಸ್.ಎಸ್.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ ಉಪನ್ಯಾಸಕ ಎ.ಎ. ಖಾಜಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅರ್ಜುನ ಕಾಂಬೋಗಿ ಫಲಿತಾಂಶ ವಿಶ್ಲೇಷಣೆ ಮಾಡಿದರು. ಡಯಟ್ ಉಪ ಪ್ರಾಚಾರ್ಯ ಜೆ.ಜಿ. ಸೈಯದ್, ಡಿವೈಪಿಸಿ ಎಸ್.ಎಂ. ಹುಡೇದಮನಿ, ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ರಾಮಕೃಷ್ಣ ಸದಲಗಿ, ಶಿವಾನಂದ ಮಲ್ಲಾಡ, ಚನ್ನಪ್ಪಗೌಡರ, ಮಹಾದೇವಿ ಮಾಡಲಗೇರಿ, ಉಮಾದೇವಿ ಬಸಾಪುರ ಇದ್ದರು.