ಸಾರಾಂಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಿರ್ವ ಹಿಂದೂ ಪ್ರೌಢಶಾಲಾ ಶಿಕ್ಷಕರನ್ನು ಶಿರ್ವ ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಿರ್ವ ಹಿಂದೂ ಪ್ರೌಢಶಾಲಾ ಶಿಕ್ಷಕರನ್ನು ಶಿರ್ವ ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.ಶನಿವಾರ ಶಾಲಾ ಸಭಾಂಗಣದಲ್ಲಿ ಜರುಗಿದ ಶಾಲಾ ಇಂಟರ್‍ಯಾಕ್ಟ್ ೨೦೨೪-೨೫ನೇ ಸಾಲಿನ ಅಧ್ಯಕ್ಷೆ ತನಿಷಾ, ಕಾರ್ಯದರ್ಶಿ ಸಪ್ನಾ ಬಳಗದ ಪದಗ್ರಹಣ ಸಮಾರಂಭದಲ್ಲಿ ಶಾಲಾ ಮುಖ್ಯಶಿಕ್ಷಕಿ ವಸಂತಿ ಹಾಗೂ ಸಹಶಿಕ್ಷಕರನ್ನು ಶಾಲಾ ಹಳೆವಿದ್ಯಾರ್ಥಿ ಹಾಗೂ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಸನ್ಮಾನಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯಶಿಕ್ಷಕಿ ವಸಂತಿ ಮಾತನಾಡಿ, ಶಿರ್ವ ರೋಟರಿಯವರು ಶಾಲೆಗೆ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದಲ್ಲದೆ, ಶಾಲೆಯಲ್ಲಿ ಇಂಟರ್‍ಯಾಕ್ಟ್ ಸಂಸ್ಥೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ, ಸೇವೆ, ಜೀವನ ಮೌಲ್ಯಗಳನ್ನು ರೂಪಿಸುವಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಶಾಲಾ ಉತ್ತಮ ಫಲಿತಾಂಶಕ್ಕಾಗಿ ಇಂದು ಶಿಕ್ಷಕರನ್ನು ಅಭಿನಂದಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಸಮುದಾಯ ದಳದ ಚೇರ್ಮನ್ ಬಿ. ಪುಂಡಲೀಕ ಮರಾಠೆ, ಇಂಟರ್‍ಯಾಕ್ಟ್ ಸಲಹಾ ಸಮಿತಿ ಸಭಾಪತಿ ಹೊನ್ನಯ್ಯ ಶೆಟ್ಟಿಗಾರ್, ರೋಟರಿ ಕಾರ್ಯದರ್ಶಿ ಈವನ್ ಜೂಡ್ ಡಿಸೋಜ ಶುಭ ಹಾರೈಸಿದರು. ಇಂಟರ್‍ಯಾಕ್ಟ್ ಟೀಚರ್ ಕೋರ್ಡಿನೇಟರ್ ಕೇಶವ, ಇಂಟರ್‍ಯಾಕ್ಟ್ ನಿಕಟಪೂರ್ವ ಅಧ್ಯಕ್ಷ ಯಶ್ವಿನ್, ಕಾರ್ಯದರ್ಶಿ ಅನನ್ಯಾ ವೇದಿಕೆಯಲ್ಲಿದ್ದರು. ಕೀರ್ತನಾ ಸ್ವಾಗತಿಸಿದರು. ಧನ್ಯಶ್ರೀ ನಿರೂಪಿಸಿದರು. ತ್ರಿಷಾ ವಂದಿಸಿದರು.