ಎಸ್ಸೆಸ್ಸೆಲ್ಸಿ ಫಲಿತಾಂಶ, ಹಾವೇರಿ ಜಿಲ್ಲೆಗೆ 13ನೇ ಸ್ಥಾನ, ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

| Published : May 03 2025, 12:16 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ, ಹಾವೇರಿ ಜಿಲ್ಲೆಗೆ 13ನೇ ಸ್ಥಾನ, ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಜಿಲ್ಲೆ ಪ್ರಸಕ್ತ ವರ್ಷ ಎರಡು ಸ್ಥಾನ ಮೇಲಕ್ಕೇರಿದೆ. ಜತೆಗೆ, ಫಲಿತಾಂಶದಲ್ಲೂ ಏರಿಕೆ ಕಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ 13ನೇ ಸ್ಥಾನ ದೊರೆತಿದ್ದು, ಶೇ.69.17ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಜಿಲ್ಲೆ ಪ್ರಸಕ್ತ ವರ್ಷ ಎರಡು ಸ್ಥಾನ ಮೇಲಕ್ಕೇರಿದೆ. ಜತೆಗೆ, ಫಲಿತಾಂಶದಲ್ಲೂ ಏರಿಕೆ ಕಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 21072 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, 14576 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ. 69.17ರಷ್ಟಾಗಿದೆ.

ಮಾಧ್ಯಮವಾರು ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 14290 ವಿದ್ಯಾರ್ಥಿಗಳಲ್ಲಿ 9346 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 65.40ರಷ್ಟು ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 4849 ವಿದ್ಯಾರ್ಥಿಗಳಲ್ಲಿ 4116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 84.88ರಷ್ಟು ಫಲಿತಾಂಶ ದಾಖಲಾಗಿದೆ. ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದ 1933 ವಿದ್ಯಾರ್ಥಿಗಳಲ್ಲಿ 1114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 57.63ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣರೇ ಮೇಲುಗೈ: ಪ್ರದೇಶವಾರು ಫಲಿಂತಾಂಶದಲ್ಲಿ ಗ್ರಾಮೀಣ ಭಾಗದವರೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ಪರೀಕ್ಷೆ ಹಾಜರಾದ 6487 ವಿದ್ಯಾರ್ಥಿಗಳಲ್ಲಿ 4325 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 14585 ವಿದ್ಯಾರ್ಥಿಗಳಲ್ಲಿ 10251 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 70.28ರಷ್ಟು ಸಾಧನೆಯಾಗಿದೆ.ಇವರೇ ಜಿಲ್ಲೆಗೆ ಟಾಪರ್: ಹಾನಗಲ್ಲ ತಾಲೂಕಿನ ರೋಶನಿ ಪ್ರೌಢಶಾಲೆ ವಿದ್ಯಾರ್ಥಿನಿ ಆದಿತಿ ಹಾವಣಗಿ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಕನ್ನಡ ಮಾಧ್ಯಮದಲ್ಲಿ ಹಾನಗಲ್ಲ ಎನ್‌ಸಿಜೆ ಪಪೂಕಾ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ವರ್ಷಿಣಿ ಹಳ್ಳೇರ 621 ಅಂಕ ಗಳಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ರಾಣಿಬೆನ್ನೂರು ತಾಲೂಕಿನ ಕುಪ್ಪೇಲೂರ ಗ್ರಾಮದ ವಿದ್ಯಾರಣ್ಯ ಪ್ರೌಢಶಾಲೆ ವಿದ್ಯಾರ್ಥಿನಿ ಅಮೂಲ್ಯ ಜಿಗಳಿ 620 ಅಂಕ ಗಳಿಸಿ ದ್ವಿತೀಯ ಹಾಗೂ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನಾ ಪ್ರೌಢಶಾಲೆ ವಿದ್ಯಾರ್ಥಿ ಶಶಿಕಲಾ ಹುಲಿಹಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ ಹಾನಗಲ್ಲ ತಾಲೂಕಿನ ರೋಶನಿ ಪ್ರೌಢಶಾಲೆ ವಿದ್ಯಾರ್ಥಿನಿ ಆದಿತಿ ಹಾವಣಗಿ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ರಾಣಿಬೆನ್ನೂರು ತಾಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಪೃಥ್ವೀಶ ಗೊಲ್ಲರಹಳ್ಳಿ 622 ಅಂಕ ಗಳಿಸಿ ದ್ವಿತೀಯ, ಬುರಡಿಕಟ್ಟಿ ಗ್ರಾಮದ ಸೇಂಟ್ ಮೇರಿ ಪ್ರೌಢಶಾಲೆ ವಿದ್ಯಾರ್ಥಿನಿ ನೇಹಾ ಬಣಕಾರ, ಹಾವೇರಿ ಸಾಯಿಚಂದ್ರ ಗುರುಕುಲ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರೀತಿ ಜೈನ್, ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ಜ್ಞಾನಸಿಂಚನ ಪ್ರೌಢಶಾಲೆಯ ವಿದ್ಯಾರ್ಥಿನಿ ತನ್ವಿ ಪುಟ್ಟಕ್ಕಳವರ ಸೇರಿ ಮೂವರು 621 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಉರ್ದು ಮಾಧ್ಯಮದಲ್ಲಿ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಜೀರ ಬೇವಿನಮರದ 617 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ, ಅದೇ ಶಾಲೆಯ ಶ್ವಾಗುಪ್ತಾ ದೊಡ್ಡಮನಿ 614 ಅಂಕ ಗಳಿಸಿ ದ್ವಿತೀಯ, ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಜೀರಬಾನು ಅಂದಲಗಿ 611 ಅಂಕ ಗಳಿಸಿ ತೃತೀಯ ಪಡೆದುಕೊಂಡಿದ್ದಾರೆ.