ಸಾರಾಂಶ
ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನಲ್ಲಿ ಈ ಬಾರಿ ವಿದ್ಯಾರ್ಥಿನಿಯರ ಫಲಿತಾಂಶ ಪ್ರಸ್ತುತ ವರ್ಷ ಶೇ. 70ರಷ್ಟಿದ್ದರೆ ವಿದ್ಯಾರ್ಥಿಗಳ ಫಲಿತಾಂಶ ಶೇ. 40ರಷ್ಟಾಗಿದೆ. ಇದು ಅತ್ಯಂತ ಕಳಪೆ ಫಲಿತಾಂಶಕ್ಕೆ ಕಾರಣವಾಗಿದೆ.
ರಟ್ಟೀಹಳ್ಳಿ: ಹಿರೇಕೆರೂರು- ರಟ್ಟೀಹಳ್ಳಿ ತಾಲೂಕಿನ ಎಸ್ಎಸ್ಎಲ್‌ಸಿ ಫಲಿತಾಂಶ ಕಳೆದ ವರ್ಷಕಿಂತ ಈ ಬಾರಿ ಶೇ. 4ರಷ್ಟು ಕುಸಿತ ಕಂಡಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಬಿ. ವಸಂತಕುಮಾರ ತಿಳಿಸಿದರು.ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ 2023- 24ನೇ ಸಾಲಿನಲ್ಲಿ ಶೇ. 64ರಷ್ಟಿದ್ದ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಸ್ತುತ ವರ್ಷ ಶೇ. 60ಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಈ ಬಾರಿ ವಿದ್ಯಾರ್ಥಿನಿಯರ ಫಲಿತಾಂಶ ಪ್ರಸ್ತುತ ವರ್ಷ ಶೇ. 70ರಷ್ಟಿದ್ದರೆ ವಿದ್ಯಾರ್ಥಿಗಳ ಫಲಿತಾಂಶ ಶೇ. 40ರಷ್ಟಾಗಿದೆ. ಇದು ಅತ್ಯಂತ ಕಳಪೆ ಫಲಿತಾಂಶಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳು ಶೇ. 70, ಅನುದಾನಿತ ಶಾಲೆಗಳು ಶೇ. 44, ಅನುದಾನರಹಿತ ಶಾಲೆಗಳ ಫಲಿತಾಂಶ ಶೇ. 81ರಷ್ಟಾಗಿದೆ. ಇಲ್ಲಿ ಅನುದಾನಿತ ಶಾಲೆಗಳ ಫಲಿತಾಂಶ ಕುಸಿದ ಪರಿಣಾಮ ಹಾಗೂ ವಿದ್ಯಾರ್ಥಿಗಳು ಸರಿಯಾಗಿ ತರಗತಿಗಳಿಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಕಲಿಕೆಯಲ್ಲಿ ಹಿಂದುಳಿದ ಪರಿಣಾಮ ಫಲಿತಾಂಶ ಕುಸಿದಿದೆ ಎಂದರು. ಮುಂಬರುವ 2025- 26ನೇ ಸಾಲಿನ ಫಲಿತಾಂಶದ ಹೆಚ್ಚಳಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿದ್ದೇವೆ. ಶಾಸಕರ ನೇತೃತ್ವದಲ್ಲಿ ಪಾಲಕರು ಮತ್ತು ಮಕ್ಕಳ ಸಭೆ ನಡೆಸಿ ಅವರಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಬಿ. ವಸಂತಕುಮಾರ ಮಾತನಾಡಿ, ಸರ್ಕಾರ ಬಡವರಿಗಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪ ಕೇಳಿ ಬಂದರೂ ಆಹಾರ ಇಲಾಖೆಯ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಆಹಾರ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ತೂಕದಲ್ಲಾಗುವ ಮೋಸವನ್ನು ತಡೆಗಟ್ಟಬೇಕು ಎಂದರು.ಮುಂಬರುವ 2025- 26ನೇ ಸಾಲಿನಲ್ಲಿ ಎಲ್ಲ ಇಲಾಖೆಯವರು ಸರ್ಕಾರದ ಅನುದಾನಗಳನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಎಸ್ಟಿಮೆಂಟ್ ಮಾಡಬೇಕು. ಇದರಿಂದ ಕೆಲಸಕ್ಕೆ ತಕ್ಕಂತೆ ಹಣ ಬಿಡುಗಡೆಗೆ ಅನುಕೂಲವಾಗುವುದು. ಇಲ್ಲವಾದಲ್ಲಿ ಎಸ್ಟಿಮೆಂಟ್ ತಪ್ಪಾದರೆ ಕೆಲಸದ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಕಿ ಕಾಮಗಾರಿಗಳಿಗೆ ಶಾಸಕರ ಗಮನಕ್ಕೆ ತಂದು ಕಾರ್ಯ ನಿರ್ವಹಿಸಿ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ಬೊಮ್ಮಣ್ಣನವರ, ತಾಲೂಕು ಪಂಚಾಯಿತಿ ಲೆಕ್ಕಾಧಿಕಾರಿ ದಿನೇಶ ಟಿ.ಎಚ್., ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ತುಂಗಾ ಮೇಲ್ದಂಡೆ, ಹೆಸ್ಕಾಂ, ಆಹಾರ ಇಲಾಖೆ, ಪಿಡಬ್ಲ್ಯುಡಿ, ಅರಣ್ಯ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಕ್ಷರ ದಾಸೋಹ, ಪಶು ಸಂಗೋಪನೆ, ಎಪಿಎಂಸಿ ಪಂಚಾಯತ್ ರಾಜ್ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.