ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ಈ ಬಾರಿ 7ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಕುಸಿದಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿರುವುದು ಅಧಿಕಾರಿಗಳಲ್ಲಿ ಇರುಸು ಮುರಿಸು ಉಂಟು ಮಾಡಿದೆ. ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈ ಬಾರಿ ಮೊದಲ ಐದು ಸ್ಥಾನದಲ್ಲಿ ಸ್ಥಾನಗಿಟ್ಟಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಶುಕ್ರವಾರ ಪ್ರಕಟವಾದ ಫಲಿತಾಂಶದಲ್ಲಿ ಜಿಲ್ಲೆ 15 ಸ್ಥಾನಕ್ಕೆ ತಳಲ್ಪಟ್ಟಿದ್ದು ಅಧಿಕಾರಿಗಳಲ್ಲಿನ ಬೇಸರಕ್ಕೆ ಕಾರಣವಾಗಿದೆ.
ಶಾಲಾ ಶಿಕ್ಷಣ ಇಲಾಖೆಯು ಫಲಿತಾಂಶ ಹೆಚ್ಚಿಸಲು ಹಮ್ಮಿಕೊಂಡಿದ್ದ ಪ್ರಯತ್ನಗಳು ವಿಫಲವಾಗಿವೆ. 50 ಅಂಶಗಳ ಕಾರ್ಯಕ್ರಮ ಕೈಕೊಟ್ಟಿದೆ. ಆದರೂ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.43 ಮಕ್ಕಳು 620ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ವಿಶೇಷ. ನಗರದ ಮರಿಮಲ್ಲಪ್ಪ ಪ್ರೌಢಶಾಲೆಯ ಎಸ್. ಧನುಷ್ ಮತ್ತು ಭಾರತೀಯ ವಿದ್ಯಾಭವನದ ಆರ್. ತಾನ್ಯಾ ಅವರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮರಾಗಿದ್ದಾರೆ.
ಅಂತೆಯೇ ಜಿಲ್ಲೆಯ ನಾಲ್ಕು ಮಂದಿ ವಿದ್ಯಾರ್ಥಿಗಳು 624 ಅಂಕ ಪಡೆದರೆ, ಐದು ಮಂದಿ 623 ಅಂಕ, ಹನ್ನೊಂದು ಮಂದಿ 622 ಅಂಕ, ಒಂಭತ್ತು ಮಂದಿ 621 ಹಾಗೂ ಹನ್ನೆರೆಡು ಮಂದಿ ವಿದ್ಯಾರ್ಥಿಗಳು 620 ಅಂಕಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಹಾಜರಾಗಿದ್ದ ಜಿಲ್ಲೆಯ 35,557 ವಿದ್ಯಾರ್ಥಿಗಳ ಪೈಕಿ 24,117 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರ. ಈ ಮೂಲಕ ಜಿಲ್ಲೆಗೆ ಶೇ. 68.39 ಫಲಿತಾಂಶ ಲಭ್ಯವಾಗಿದೆ. ಜಿಲ್ಲೆಯ 26 ಶಾಲೆಗಳು ಶೇ. 100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿವೆ. ಒಂದು ಖಾಸಗಿ ಶಾಲೆ ಶೂನ್ಯ ಫಲಿತಾಂಶ ಪಡೆದಿದೆ.
ಜಿಲ್ಲೆಯಲ್ಲಿ 324 ವಿಶೇಷ ಚೇತನ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 179 ಮಕ್ಕಳು ಉತ್ತೀರ್ಣರಾಗಿದ್ದಾರೆ.ಹೆಣ್ಮಕ್ಳೆ ಸ್ಟ್ರಾಂಗು ಗುರು:
ಪರೀಕ್ಷೆಗೆ ಹಾಜರಾಗಿದ್ದ 35,557 ವಿದ್ಯಾರ್ಥಿಗಳಲ್ಲಿ 17,557 ಬಾಲಕರು ಪರೀಕ್ಷೆ ಬರೆದಿದ್ದು, ಈ ಪೈಕಿ 10,174 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಪರೀಕ್ಷೆಗೆ ಹಾಜರಾಗಿದ್ದ 18,000 ವಿದ್ಯಾರ್ಥಿನಿಯರ ಪೈಕಿ 13,943 ಮಕ್ಕಳು ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.ನಗರ ಪ್ರದೇಶವೇ ಮುಂದು: ಈ ಬಾರಿ ಗ್ರಾಮೀಣ ಭಾಗದ ಮಕ್ಕಳಿಗಿಂತ ನಗರದ ಮಕ್ಕಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 16,262 ಮಕ್ಕಳಲ್ಲಿ 11,616 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 71.43ರಷ್ಟು ಫಲಿತಾಂಶ ಲಭ್ಯವಾಗಿದೆ. ಹಾಗೆಯೇ ಗ್ರಾಮೀಣ ಭಾಗದ 19,295 ಮಕ್ಕಳು ಪರೀಕ್ಷೆ ಬರೆದಿದ್ದು ಈ ಪೈಕಿ 12,501 ಮಂದಿ ಉತ್ತೀರ್ಣರಾಗಿದ್ದು, ಶೇ. 54.79ರಷ್ಟು ಫಲಿತಾಂಶ ಲಭ್ಯವಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯ 14,965 ಮಕ್ಕಳಲ್ಲಿ 19,389 ಮಂದಿ ಉತ್ತೀರ್ಣರಾಗಿದ್ದು ಶೇ. 62.24 ಫಲಿತಾಂಶ ಬಂದಿದೆ. ಹಾಗೆಯೇ ಅನುದಾನಿತ ಶಾಲೆಯಿಂದ 7,719 ವಿದ್ಯಾರ್ಥಿಗಳಲ್ಲಿ 4,830 ಮಂದಿ ಉತ್ತೀರ್ಣರಾಗಿದ್ದು ಶೇ. 62.57 ಫಲಿತಾಂಶ ಲಭಿಸಿದೆ. ಖಾಸಗಿ ಶಾಲೆಗಳಿಂದ 12,873 ಮಕ್ಕಳಲ್ಲಿ 9,898 ಮಕ್ಕಳು ಉತ್ತೀರ್ಣರಾಗಿದ್ದು ಶೇ. 76.89ರಷ್ಟು ಫಲಿತಾಂಶ ಲಭಿಸಿದೆ.