ಪರೀಕ್ಷೆ ಬರೆಯುತ್ತಿದ್ದಾಗಲೇ ಅಸ್ವಸ್ಥನಾಗಿ ವಿದ್ಯಾರ್ಥಿ ಸಾವು

| Published : Mar 26 2024, 01:15 AM IST

ಪರೀಕ್ಷೆ ಬರೆಯುತ್ತಿದ್ದಾಗಲೇ ಅಸ್ವಸ್ಥನಾಗಿ ವಿದ್ಯಾರ್ಥಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಬರೆಯುತ್ತಿದ್ದಾಗಲೇ ವಿದ್ಯಾರ್ಥಿಯೊಬ್ಬ ತೀವ್ರ ಅಸ್ವಸ್ಥಗೊಂಡು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿರುವ ಘಟನೆ ಪಟ್ಟಣದ ಶ್ರೀ ಸರಸ್ವತಿ ಬಾಲಕಿಯರ ಪ್ರೌಢಶಾಲಾ ಕೇಂದ್ರದಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ(ತುಮಕೂರು)

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಬರೆಯುತ್ತಿದ್ದಾಗಲೇ ವಿದ್ಯಾರ್ಥಿಯೊಬ್ಬ ತೀವ್ರ ಅಸ್ವಸ್ಥಗೊಂಡು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿರುವ ಘಟನೆ ಪಟ್ಟಣದ ಶ್ರೀ ಸರಸ್ವತಿ ಬಾಲಕಿಯರ ಪ್ರೌಢಶಾಲಾ ಕೇಂದ್ರದಲ್ಲಿ ಸೋಮವಾರ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಚಿಕ್ಕರಾಂಪುರ ಗ್ರಾಮದ ಸಿ.ಎಸ್‌.ಮೋಹನ್ ಕುಮಾರ್ (16) ಮೃತ ವಿದ್ಯಾರ್ಥಿ. ತಾಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯ ಕಂಚೀರಾಯ ಶ್ರೀನಿವಾಸ ಪ್ರೌಢಶಾಲೆ ವಿದ್ಯಾರ್ಥಿಯಾಗಿರುವ ಈತ, ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲೇ ಮೋಹನ್ ಕುಮಾರ್‌ ತೀವ್ರ ಅಸ್ವಸ್ಥನಾಗಿದ್ದಾನೆ. ಅಲ್ಲೇ ಇದ್ದ ಸಿಬ್ಬಂದಿ ಸ್ಥಳದಲ್ಲಿದ್ದ ಆರೋಗ್ಯ ಸಹಾಯಕರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲೂ ಆತ ಚೇತರಿಸಿಕೊಳ್ಳದಿದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ.

ಅದರಂತೆ ಆಂಬ್ಯುಲೆನ್ಸ್‌ನಲ್ಲಿ ಮೋಹನ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಸಂಪೂರ್ಣ ನಿತ್ರಾಣಗೊಂಡಿದ್ದು, ದಾರಿ ಮಧ್ಯೆ ಗುಬ್ಬಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿಸಲಾಗಿದೆ. ಆ ವೇಳೆಗಾಗಲೇ ಮೋಹನ್ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೋರ್ವ ಅಸ್ವಸ್ಥ: ತಾಲೂಕಿನ ಹುಲ್ಲೇಕೆರೆ ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ರೋಹಿತ್ ಎಂಬ ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ವಾಂತಿ ಮತ್ತು ಭೇದಿ ಮಾಡಿಕೊಂಡ ಘಟನೆ ನಡೆದಿದೆ. ಈತನಿಗೆ ದಂಡಿನಶಿವರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಆತ ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ತಿಳಿದುಬಂದಿದೆ.