2026ರ ಎಸ್ಎಸ್ಎಲ್ಸಿ ಫಲಿತಾಂಶವು ಕಳೆದ ಒಂದು ದಶಕದಲ್ಲಿಯೇ ಜಿಲ್ಲೆಯ ಮಟ್ಟಿಗೆ ಅತಿ ಹೆಚ್ಚು ಶೇ. 95.38ರಷ್ಟಾಗಿದೆ.
2026ರಲ್ಲಿ ಶೇ. 95.38 ಫಲಿತಾಂಶ, 12ನೇ ಸ್ಥಾನದಲ್ಲಿರುವ ಧಾರವಾಡ ಜಿಲ್ಲೆ
ಈ ಸ್ಥಾನ ಉಳಿಸಿಕೊಳ್ಳಲು ಈ ಬಾರಿಯೂ ಅದಕ್ಕೂ ಹೆಚ್ಚು ಪ್ರಯತ್ನ ಬೇಕುಕಳೆದ ವರ್ಷ ಮಿಶನ್ ವಿದ್ಯಾಕಾಶಿ @40, ಈ ಬಾರಿ ಮಿಶನ್ ವಿದ್ಯಾಕಾಶಿ @ 60ರ ಗುರಿ
ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಧಾರವಾಡ
2026ರ ಎಸ್ಎಸ್ಎಲ್ಸಿ ಫಲಿತಾಂಶವು ಕಳೆದ ಒಂದು ದಶಕದಲ್ಲಿಯೇ ಜಿಲ್ಲೆಯ ಮಟ್ಟಿಗೆ ಅತಿ ಹೆಚ್ಚು ಶೇ. 95.38ರಷ್ಟಾಗಿದೆ. ಜತೆಗೆ ಈ ಫಲಿತಾಂಶದ ಮೂಲಕ ರಾಜ್ಯದ ಮಟ್ಟಿಗೆ 18ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಧಾರವಾಡ ಜಿಲ್ಲೆಯು ಬಡ್ತಿ ಸಹ ಪಡೆದಿತ್ತು. ಉತ್ತಮ ಫಲಿತಾಂಶದೊಂದಿಗೆ ಈ ಸ್ಥಾನವನ್ನು ಉಳಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಈಗಿನಿಂದಲೇ ಕಸರತ್ತು ಶುರು ಮಾಡಿದೆ.ಪ್ರಸ್ತುತ 2027ರ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಘೋಷಣೆ ಹಾಗೂ ನ. 11ರ ವರೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ನೋಂದಣಿ ದಿನಾಂಕ ಘೋಷಣೆಯ ಬೆನ್ನಲ್ಲಿಯೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೆನ್ನು ಬಿದ್ದಿದ್ದಾರೆ.
ಗುರಿ 40ರಿಂದ 60ಕ್ಕೆ ಏರಿಕೆ:ಕಳೆದ ಬಾರಿ ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ 40 ಅಂಕ ಪಡೆದು ಪಾಸಾಗಬೇಕೆಂದು ಮಿಶನ್ ವಿದ್ಯಾಕಾಶಿ @40 ಹೆಸರಿನಲ್ಲಿ ಪ್ರಯತ್ನ ನಡೆದಿತ್ತು. ಪ್ರಸ್ತುತ ಮಿಶನ್ ವಿದ್ಯಾಕಾಶಿ @60 ಅಂದರೆ ಪ್ರತಿ ಎಸ್ಎಸ್ಎಲ್ಸಿ ವಿದ್ಯಾರ್ಥಿ 60 ಅಂಕಗಳನ್ನು ಪಡೆದು ಪಾಸಾಗುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕೆ ಬೇಕಾದ ಪ್ರಯತ್ನಗಳು ಈಗಿನಿಂದಲೇ ಇಲಾಖೆಯು ನಡೆಸುತ್ತಿದೆ. ಈಗಾಗಲೇ ಒಂದು ಹಂತದ ಯೋಜನೆ ರೂಪಿಸಿದ್ದು, ಶಿಕ್ಷಣ ಇಲಾಖೆ ಅಪರ ಆಯುಕ್ತರ ಅಧ್ಯಕ್ಷತೆಯಲ್ಲಿ ಅ. 23ರೊಳಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರ ಮಾಡಲು ಇಲಾಖೆಯು ಯೋಜಿಸಿದೆ.
ಈಗಾಗಲೇ ಇಲಾಖೆಯು 2027ರ ಎಸ್ಎಸ್ಎಲ್ಸಿ ಪರೀಕ್ಷೆಯ ನಾಲ್ಕು ಮಾದರಿಯ ನೀಲನಕ್ಷೆ ನೀಡಿದ್ದು, ಅವುಗಳನ್ನು ಆಧರಿಸಿ ಪ್ರತಿ ಮಗು 60 ಅಂಕಗಳ ಸಾಧನೆ ಮಾಡಲು ಬೇಕಾದ ತಂತ್ರಗಳನ್ನು ಸಂಪನ್ಮೂಲ ವ್ಯಕ್ತಿಗಳು ಶಾಲೆಯ ಶಿಕ್ಷಕರಿಗೆ ಹಾಗೂ ಶಿಕ್ಷಕರು ತಮ್ಮ ಶಾಲಾ ಮಕ್ಕಳಿಗೆ ತಿಳಿಸಿ ಕೊಡಲಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಇನ್ನೂ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸಮಯಾವಕಾಶ ಇದ್ದು, ಪೂರ್ಣ ಪ್ರಮಾಣದಲ್ಲಿ ಇಲಾಖೆ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಒಳಗೊಂಡು ಪ್ರಯತ್ನ ಮಾಡಬೇಕಿದೆ. ಜತೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿದ್ದು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಒಂದೊಂದು ಶಾಲೆಯನ್ನು ನೀಡಿದ್ದು, ಅವರು ಆಯಾ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಬೇಕಾದ ಸೌಲಭ್ಯ ಒದಗಿಸುವ ನೂತನ ಯೋಜನೆಯನ್ನು ಸಹ ಇಲಾಖೆ ಹೊಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕಳೆದ ಜುಲೈ ತಿಂಗಳಿಂದಲೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಜತೆಗೆ ಪ್ರಸ್ತುತ ಅಧ್ಯಯನದಲ್ಲಿ ಹಿಂದಿರುವ ಮಕ್ಕಳನ್ನು ಗುರುತಿಸಿದ್ದು, ಶಾಲೆಗಳು ಆರಂಭದ ದಿನದಿಂದಲೂ ಆ ಮಕ್ಕಳಿಗೆ ಶಾಲಾ ಅವಧಿ ಪೂರ್ವ ಹಾಗೂ ನಂತರದಲ್ಲಿ ವಿಶೇಷ ತರಗತಿಗಳ ಮೂಲಕ ಕನಿಷ್ಠ ಪಾಸಾಗಲು ಬೇಕಾದ ಅಂಕ ಪಡೆಯಲು ಸಿದ್ಧಗೊಳಿಸಲಾಗುತ್ತಿದೆ. ಇದರೊಂದಿಗೆ ಪ್ರತಿಯೊಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ಗೆ ಹೋಗಿ ಶಾಲಾ ಲಾಗಿನ್ ಒಪನ್ ಮಾಡಿದರೆ ಪರೀಕ್ಷೆಗೆ ಉತ್ತಮ ಅಂಕಗಳನ್ನು ಪಡೆಯಲು ಬೇಕಾದ ಅನೇಕ ಮಾಹಿತಿ ನೀಡಲಾಗಿದೆ. ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿಗಳಿವೆ. ಪ್ರಶ್ನೆ ಜತೆಗೆ ಉತ್ತರಗಳ ಲಭ್ಯತೆ ಇದೆ. ಪ್ರಮುಖವಾಗಿ ಕಳೆದ ವರ್ಷ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಈ ಲಾಗಿನ್ನಲ್ಲಿ ಲಭ್ಯ ಇರುವುದರಿಂದ ಅವುಗಳ ಮಾದರಿಯು ಪ್ರಸ್ತುತ ಎಸ್ಎಸ್ಎಲ್ಸಿ ಬರೆಯುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲಿದೆ ಎನ್ನುತ್ತಾರೆ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ನಫೀಜಬಾನು ದಾವಲಸಾಬ್.
ಎಷ್ಟು ಗುರಿ ಸಾಧನೆ?ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ದಿವ್ಯಪ್ರಭು ಮಿಶನ್ ವಿದ್ಯಾಕಾಶಿ @ 40 ಹೆಸರಿನಲ್ಲಿ ಅನೇಕ ವಿಶೇಷ ಶೈಕ್ಷಣಿಕ ಕಾರ್ಯಕ್ರಮ ಹಾಗೂ ನಿರಂತರ ಪ್ರಯತ್ನಗಳ ಫಲವಾಗಿ 2026ರ ಫಲಿತಾಂಶ ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ದಾಖಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಈಗಿನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಹ ಮಿಶನ್ ವಿದ್ಯಾಕಾಶಿ @60 ಹೆಸರಿನಲ್ಲಿ ಶಿಕ್ಷಣ ಇಲಾಖೆಗೆ ಉತ್ತಮ ಫಲಿತಾಂಶದ ಗುರಿ ನೀಡಿದ್ದಾರೆ. ಆದರೆ, ಡಿಡಿಪಿಐ ಹುದ್ದೆಯು ಖಾಲಿಯಾಗಿ ಮೂರು ತಿಂಗಳಾಗಿದ್ದು, ಉಮೇಶ ಬೊಮ್ಮಕ್ಕನವರ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಎಷ್ಟರ ಮಟ್ಟಿಗೆ ಇಲಾಖೆಯು ಗುರಿ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.