ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ: ಇಲ್ಲಿಯ ಪರಿಶಿಷ್ಟ ಪಂಗಡ ವರ್ಗಗಳ ಮೆಟ್ರಿಕ್ ನಂತರ ವಸತಿ ನಿಲಯದ ಕಟ್ಟಡ ವಿದ್ಯಾರ್ಥಿಗಳ ಪಾಲಿಗೆ ಮರೀಚಿಕೆಯಾಗಿದೆ.ಹಲವಾರು ವರ್ಷಗಳಿಂದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಇಲ್ಲದ ಕಾರಣ ಹಣ ವಾಪಸ್ ಹೋಗಿತ್ತು. ಈಗ ಸರ್ಕಾರ ₹5 ಕೋಟಿ ಮೀಸಲಿಸಿದೆ. ಆದರೆ, 5 ತಿಂಗಳಿಂದ ಕಟ್ಟಡ ನಿರ್ಮಾಣದ ಅಂದಾಜು ಪಟ್ಟಿಗೆ ಅನುಮೋದನೆ ದೊರಕದ ಕಾರಣ ಕಾಮಗಾರಿ ವಿಳಂಬವಾಗಿದ್ದು, ವಿದ್ಯಾರ್ಥಿಗಳು ಜಯನಗರದಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡುವಂತಾಗಿದೆ.
ಹಿಂದೆ ಗಂಗಾವತಿ ನಗರದಲ್ಲಿ ಪರಿಶಿಷ್ಟ ಪಂಗಡ ವರ್ಗಗಳ ಮೆಟ್ರಿಕ್ ನಂತರ ವಸತಿ ನಿಲಯದ ಕಟ್ಟಡಕ್ಕೆ ನಿವೇಶನ ಇಲ್ಲ ಎಂಬ ಕಾರಣದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಿಯಾಗಿದ್ದ ₹5 ಕೋಟಿ ಅನುದಾನ ವಾಪಸಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕೂಡಲೆ ನಿವೇಶನ ನೀಡುವಂತೆ ಪೌರಾಡಳಿತ ಇಲಾಖೆ ಮೂಲಕ ನಗರಸಭೆಗೆ ಸೂಚನೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ನಗರಸಭೆಯು ಕನಕಗಿರಿ ರಸ್ತೆಯ ಕ್ರಿಯೆಟಿವ್ ಪಾರ್ಕ್‌ನ ಮಧ್ಯವಿದ್ದ ಸಿಎ ಸೈಟ್ 100/100 ಅಳತೆಯ ನಿವೇಶನ ನೀಡಿ ಸರ್ಕಾರಕ್ಕೆ ವರದಿ ನೀಡಿತ್ತು. ಆನಂತರ ಸರ್ಕಾರ ಮತ್ತೆ ₹5 ಕೋಟಿ ಅನುದಾನ ನೀಡಿದೆ. ಅದರಂತೆ ಕರ್ನಾಟಕ ವಸತಿ ಶಾಲೆಗಳ ಸಂಸ್ಥೆ (ಕೆಆರ್‌ಇಐಎಸ್) ಮೇ ತಿಂಗಳಲ್ಲೇ ಕಟ್ಟಡದ ಅಂದಾಜು ವೆಚ್ಚದ ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ನಾಲ್ಕು ತಿಂಗಳು ಗತಿಸಿದರೂ ಇನ್ನೂ ಸರ್ಕಾರ ಅನುಮೋದನೆ ನೀಡಿಲ್ಲ.300 ವಿದ್ಯಾರ್ಥಿಗಳು
ಅಖಂಡ ಗಂಗಾವತಿ ತಾಲೂಕಿನಲ್ಲಿ ಪರಿಶಿಷ್ಟ ಪಂಗಡ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಒಂದೇ ಇದ್ದು, ಈಗ 300 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಗಳ ವ್ಯಾಪ್ತಿಯಲ್ಲಿ ಇದೊಂದು ವಸತಿ ನಿಲಯ ಇದ್ದು, ಈ ವಸತಿ ನಿಲಯದಲ್ಲಿ ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗೆ ಪ್ರವೇಶ ಪಡೆದು ವಸತಿ ನಿಲಯದಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸರಿಯಾದ ಕಟ್ಟಡ ಇಲ್ಲದ ಕಾರಣ ಜಯನಗರದಲ್ಲಿರುವ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.
ಇನ್ನಾದರೂ ಸರ್ಕಾರ ಕಟ್ಟಡ ನಿರ್ಮಾಣದ ಅಂದಾಜು ಪಟ್ಟಿಗೆ ಅನುಮೋದನೆ ನೀಡಿದರೆ ವಿದ್ಯಾರ್ಥಿಗಳ ವಸತಿ ನಿಲಯದ ಸಮಸ್ಯೆಗೆ ಮುಕ್ತಿ ಸಿಗಲಿದೆ.ಅನುದಾನ ಮೀಸಲುಗಂಗಾವತಿ ನಗರದ ಕನಕಗಿರಿ ರಸ್ತೆಯ ಕ್ರಿಯೆಟಿವ್ ಪಾರ್ಕ್‌ನಲ್ಲಿ ನಗರಸಭೆಯವರು ನಿವೇಶನ ಮಂಜೂರಿ ಮಾಡಿದ್ದಾರೆ. ಇದಕ್ಕೆ ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ₹5 ಕೋಟಿ ಅನುದಾನ ಮೀಸಲಾಗಿದೆ. ಆದರೆ, ಗುತ್ತಿಗೆ ಪಡೆದವರು ಕಾಮಗಾರಿ ಕೈಗೊಳ್ಳದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಗ್ಯಾನನಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಗಂಗಾವತಿಅನುಮೋದನೆಗೆಗಂಗಾವತಿ ನಗರದ ಕನಕಗಿರಿ ರಸ್ತೆಯ ಕ್ರೀಯೆಟಿವ್ ಪಾರ್ಕ್ ಬಳಿ ನಗರಸಭೆ ನೀಡಿರುವ ನಿವೇಶನದಲ್ಲಿ ₹5 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಬೇಕಾಗಿದೆ. ₹5 ಕೋಟಿ ಅಂದಾಜು ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ.
ರಂಗನಾಥ, ಎ.ಇ. ಕೆಆರ್‌ಇಐಎಸ್