ಸಾರಾಂಶ
ಪುತ್ತೂರಿನ ಸಂತ ಫಿಲೋಮಿನಾ ಪದವಿ ಕಾಲೇಜ್‌ನಲ್ಲಿ 1991ರಲ್ಲಿ ಬಿಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳು ಬರೋಬ್ಬರಿ 34 ವರ್ಷಗಳ ಬಳಿಕ ಕಾಲೇಜಿನಲ್ಲಿ ಜೊತೆ ಸೇರಿದರು. ಸುಮಾರು 34 ವಿದ್ಯಾರ್ಥಿಗಳು ಗತ ವಿದ್ಯಾರ್ಥಿಜೀವನದ ಮೆಲುಕು ಹಾಕಿದರು.
34 ವರ್ಷಗಳ ಬಳಿಕ ಜೊತೆ ಸೇರಿದ ಬಿಎಸ್ಸಿ ವಿದ್ಯಾರ್ಥಿಗಳು
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಪದವಿ ಕಾಲೇಜ್‌ನಲ್ಲಿ 1991ರಲ್ಲಿ ಬಿಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳು ಭಾನುವಾರ ಕಾಲೇಜ್‌ನಲ್ಲಿ ಮತ್ತೊಮ್ಮೆ ಜೊತೆ ಸೇರಿಕೊಂಡು ಪರಸ್ಪರ ಕುಶಲೋಪರಿ ನಡೆಸಿದರು. ಬರೋಬ್ಬರಿ 34 ವರ್ಷಗಳ ಬಳಿಗೆ ಜೊತೆ ಸೇರಿದ ಸುಮಾರು 34 ಮಂದಿ ತಮ್ಮ ಕಾಲೇಜು ಜೀವನದ ಬಗ್ಗೆ ಮುಂದಿನ ಬದುಕಿನ ಏರು ಪೇರುಗಳ ಕುರಿತು ಚರ್ಚೆ, ಸಂವಾದ ನಡೆಸಿದರು. ಈ ಕಾಲೇಜ್‌ನಲ್ಲಿ 1988 ರಿಂದ 1991ರ ತನಕ 54 ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತು ಬಿಎಸ್ಸಿ ವ್ಯಾಸಂಗ ನಡೆಸಿದ್ದರು. ಬಳಿಕ ವಿವಿಧ ಉದ್ಯೋಗಗಳನ್ನು ಅರಸಿಕೊಂಡು ದೂರವಾಗಿದ್ದರು. ಇದೀಗ ಮತ್ತೊಮ್ಮೆ ತಾವು ಕಲಿತ ಕಾಲೇಜ್‌ನಲ್ಲಿ ಒಟ್ಟು ಸೇರಿ ಹರಟೆ ಸಂವಾದ ನಡೆಸಿ ಕಾಲೇಜ್ ಜೀವನವನ್ನು ನೆನಪಿಸಿಕೊಂಡರು. 54 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಮೂವರು ಮೃತಪಟ್ಟಿದ್ದಾರೆ. ಉಳಿದಂತೆ 51 ಮಂದಿಯಲ್ಲಿ 34 ಮಂದಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣವಾದ ವಾಟ್ಸಪ್ ಇವರೆಲ್ಲರೂ ಒಟ್ಟಾಗುವುದಕ್ಕೆ ಸಾಥ್ ನೀಡಿದೆ. ಮೊದಲಿಗೆ ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಒಟ್ಟಾದ ಗೆಳೆಯರು ಬಳಿಕ ಕಾಲೇಜ್‌ನಲ್ಲಿ ಸೇರುವ ತೀರ್ಮಾನ ನಡೆಸಿದ್ದರು. ಈ ಬಗ್ಗೆ ಕಾಲೇಜ್‌ನ ಪ್ರಾಂಶುಪಾಲರಲ್ಲಿ ವಿಚಾರ ತಿಳಿಸಿದಾಗ ಅವರು ಸೇರ್ಪಡೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂತ ಫಿಲೋಮಿನಾ ಪದವಿ ಕಾಲೇಜ್‌ನ ಪ್ರಾಂಶುಪಾಲ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ಸಂತ ಫಿಲೋಮಿನಾ ಕಾಲೇಜ್ ಜವಾಬ್ದಾರಿಯುತ ನಾಗರಿಕರನ್ನು ತಯಾರಿ ಮಾಡುತ್ತಿದ್ದು, ಅದೇ ಈ ಕಾಲೇಜ್‌ನ ಆಸ್ತಿಯಾಗಿದೆ. ಇಲ್ಲಿ ಸರ್ವ ಧರ್ಮ ಸಮಭಾವನ್ನು ಕಾಯಾ ವಾಚಾ ಮನಸಾ ಪಾಲಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿಗಳು ಅವರಲ್ಲಿ ಭೇದವಿಲ್ಲ ಎಂದರು. ತಾನೂ ಈ ಕಾಲೇಜ್‌ನ ಹಳೆ ವಿದ್ಯಾರ್ಥಿಯಾಗಿ ಇದೀಗ ಶಿಕ್ಷಕನಾಗಿ, ಪ್ರಾಂಶುಪಾಲ ಆಗಿ ಕೆಲಸ ಮಾಡುತ್ತಿದ್ದೇನೆ. ಸುದೀರ್ಘ 18 ವರ್ಷಗಳ ಕಾಲ ಇದೇ ಪರಿಸರದಲ್ಲಿ ಬದುಕಿದ್ದೇನೆ. ಈ ಕಾಲೇಜು ಬೆಳೆಯಲು ಇಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶಿಕ್ಷಕರು ಹಾಗೂ ಹೊಸತನಕ್ಕೆ ತೆರೆದುಕೊಂಡಿರುವ ಕಾಲೇಜ್‌ನ ಶೈಕ್ಷಣಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು. ಕಾಲೇಜ್‌ನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವು ನಡೆಯುತ್ತಿರುವುದು ಉತ್ತಮ ವಿಚಾರವಾಗಿದ್ದು, ಸಂಸ್ಥೆಯ ಇನ್ನಷ್ಟು ಗಟ್ಟಿಯಾಗಲು ಹಳೆ ವಿದ್ಯಾರ್ಥಿಗಳಿಂದ ಇಂತಹ ಅನೇಕ ಸಮ್ಮಿಲನ ಕಾರ್ಯಕ್ರಮಗಳನ್ನು ಇಲ್ಲಿ ನಡೆಯುತ್ತಿರಬೇಕು ಎಂದರು. ಪ್ರಾಂಶುಪಾಲ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ, ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮತ್ತು ಉಪನ್ಯಾಸಕಿ ಹಾಗೂ ಕಾಲೇಜ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಭಾರತಿ ಎಸ್ ರೈ ಅವರನ್ನು ಹಳೆ ವಿದ್ಯಾರ್ಥಿಗಳು ಗೌರವಿಸಿದರು. ಹಳೆ ವಿದ್ಯಾರ್ಥಿಗಳಾದ ಡಾ. ಗಿರೀಶ್ ಭಟ್ ಅಜಕ್ಕಳ ಸ್ವಾಗತಿಸಿದರು. ವಿಷ್ಣು ಭಟ್ ವಂದಿಸಿದರು. ಡಾ. ಕೃಷ್ಣ ಪ್ರಭ ನಿರೂಪಿಸಿದರು. ಹಳೆ ವಿದ್ಯಾರ್ಥಿಗಳಾದ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೇಗಿನ ಗುತ್ತು, ಲಕ್ಷ್ಮಿ ನಾರಾಯಣ ಕಡಂಬಳಿತ್ತಾಯ ಮತ್ತಿತರರು ಸಹಕರಿಸಿದರು.