ಉಪ್ಪಿನಂಗಡಿ: ಎಸ್ ಸಿ, ಎಸ್ ಟಿ ಸಮುದಾಯದ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯು ದಿನದ ೨೪ ಗಂಟೆಯೂ ತೆರೆದಿದ್ದು, ಸಮಸ್ಯೆಗಳಿದ್ದಾಗ ಯಾವಾಗ ಬೇಕಾದರೂ ಬಂದು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬಹುದು. ಸ್ವಾತಂತ್ಸ್ಯ ಸಿಕ್ಕಿ ೭೯ ವರ್ಷವಾಗುತ್ತಾ ಬಂದರೂ ಈ ಸಮುದಾಯದ ಹಲವು ಕುಟುಂಬಗಳು ಇನ್ನೂ ತೀರಾ ಹಿಂದುಳಿದಿದ್ದು, ಅವರನ್ನು ಪರಿವರ್ತನೆ ಮಾಡುವ ಕೆಲಸವನ್ನು ಸಮುದಾಯದ ಮುಖಂಡರು ಮಾಡಬೇಕು ಎಂದು ಬೆಳ್ತಂಗಡಿ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹೇಳಿದರು.

ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ಜೂ.೨೮ರಂದು ನಡೆದ ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಉಪ್ಪಿನಂಗಡಿ ವೃತ್ತ ವ್ಯಾಪ್ತಿಯ ಜೂನ್ ತಿಂಗಳ ಎಸ್ ಸಿ, ಎಸ್ ಟಿ ಮಾಸಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಸರಕಾರದಿಂದ ನಿರಂತರ ಸೌಲಭ್ಯಗಳು ದೊರಕಿದರೂ ಎಸ್ ಸಿ, ಎಸ್ ಟಿ ಸಮುದಾಯದ ಕೆಲವು ಕಾಲೊನಿಗಳು ಇನ್ನೂ ಅಭಿವೃದ್ಧಿ ಸಾಧಿಸಿಲ್ಲ. ಒಂದು ಮನೆಯಲ್ಲಿ ಐವರು ದುಡಿದರೂ ನಯಾ ಪೈಸೆ ಉಳಿತಾಯದ ಮನೋಭಾವ ಕೆಲವರಲ್ಲಿಲ್ಲ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬುದ್ದಿವಂತರ ಜಿಲ್ಲೆ ಎನಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ರೀತಿ ಇರುವುದು ಖೇದಕರ. ಶಿಕ್ಷಣದ ಕೊರತೆ, ಮದ್ಯಪಾನದ ಚಟದೊಂದಿಗೆ ಇಂದಿನ ದುಡಿಮೆ ಇಂದಿಗೆ ಎನ್ನುವ ಮನೋಸ್ಥಿತಿ ಅವರನ್ನು ಆರ್ಥಿಕವಾಗಿ ಮುಂದೆ ಬರಲು ಬಿಟ್ಟಿಲ್ಲ. ಆದ್ದರಿಂದ ಸಮುದಾಯದ ಮುಖಂಡರು ನಿಮ್ಮ ಸುತ್ತಮುತ್ತಲಿನ ಕಾಲೊನಿಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಪರಿವರ್ತನೆ ಮಾಡುವ ಕೆಲಸ ಮಾಡಬೇಕಿದೆ. ಇಂತಹ ಸಮಸ್ಯೆಯಿಂದ ಅವರು ಮುಕ್ತವಾದಾಗ ಮಾತ್ರ ಸಮಾಜದಲ್ಲಿ ಅವರು ಮುಂದೆ ಬರಲು ಸಾಧ್ಯ ಎಂದರು.ಸಮುದಾಯದ ಮುಖಂಡ ಸೇಸಪ್ಪ ನೆಕ್ಕಿಲು ಮಾತನಾಡಿ, ಇತರ ಸಮುದಾಯದವರು ಅವರೊಳಗಿನ ಜಾಗದ ವಿವಾದಕ್ಕೋ, ಇತರ ಸಮಸ್ಯೆಗಳಿಗೋ ಇನ್ನೊಬ್ಬನ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪೊಲೀಸ್ ಕೇಸ್ ಕೊಡಿಸಲು ನಮ್ಮ ಸಮುದಾಯದವರನ್ನು ಬಳಸಿಕೊಂಡು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಗೋಪಿನಾಥ್ ಮಾತನಾಡಿ, ಎಸ್‌ಐಆರ್ ಬಗ್ಗೆ ಜನರಿಗೆ ಅರಿವಿಲ್ಲ. ಆದ್ದರಿಂದ ಪೊಲೀಸರು ಎಸ್ ಸಿ, ಎಸ್ ಟಿ ಕಾಲೊನಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು. ಇದಕ್ಕುತ್ತರಿಸಿದ ವೃತ್ತ ನಿರೀಕ್ಷಕ ರವಿ ಬಿ.ಎಸ್., ಬೀಟ್ ಪೊಲೀಸರ ಮೂಲಕ ಪ್ರತಿ ಕಾಲನಿಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಆದರೆ ಮನೆಮನೆಗೆ ಮ್ಯಾಪಿಂಗ್ ಮಾಡಲು ಬರುವವರು ಬಿಎಲ್‌ಒಗಳು. ಅವರು ಬಂದಾಗ ಮನೆಯವರು ಸರಿಯಾದ ಮಾಹಿತಿಯನ್ನು ನೀಡಬೇಕು ಎಂದರು.ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಭವ್ಯ ಸಿ.ಎಚ್., ಮಂಗಳೂರು ಪೊಲೀಸ್ ಠಾಣೆಯ ಡಿಸಿಆರ್‌ಇ ಪ್ರಸನ್ನ ಕುಮಾರ್, ದಯಾನಂದ, ಕೇಶವ, ಜಗ್ಗ, ಬಾಬು, ರವಿ, ಮೋನಪ್ಪ, ಸುಮಿತ್ರ, ರಕ್ಷಿತಾ, ದೀಕ್ಷಿತ್, ಲೊಕೇಶ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಸುತೇಶ್ ಕೆ.ಪಿ. ಸ್ವಾಗತಿಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ವಂದಿಸಿದರು.