ಶಿರಾಲಿಯ ತಟ್ಟಿಹಕ್ಲಿನಲ್ಲಿ ನಡೆದ ಜಲದುರಂತದಲ್ಲಿ ಮೃತಪಟ್ಟಿದ್ದ ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಅವರ ಕುಟುಂಬಕ್ಕೆ ಶಾಲೆಯ ಆಡಳಿತ ಮಂಡಳಿ ಮಾನವೀಯ ನೆರವು ನೀಡುವುದರ ಮೂಲಕ ಗಮನ ಸೆಳೆದಿದೆ.
ಮಗನ ಶಿಕ್ಷಣದ ಜವಾಬ್ದಾರಿಯೂ ನಿರ್ವಹಿಸುವ ಭರವಸೆ
ಕನ್ನಡಪ್ರಭ ವಾರ್ತೆ ಭಟ್ಕಳಶಿರಾಲಿಯ ತಟ್ಟಿಹಕ್ಲಿನಲ್ಲಿ ನಡೆದ ಜಲದುರಂತದಲ್ಲಿ ಮೃತಪಟ್ಟಿದ್ದ ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಅವರ ಕುಟುಂಬಕ್ಕೆ ಶಾಲೆಯ ಆಡಳಿತ ಮಂಡಳಿ ಮಾನವೀಯ ನೆರವು ನೀಡುವುದರ ಮೂಲಕ ಗಮನ ಸೆಳೆದಿದೆ.
ಸುಮಾರು 16 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಶಿವರಾಮ ನಾಯ್ಕ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ಸಹಕಾರದೊಂದಿಗೆ ಸಂಗ್ರಹಿಸಲಾದ ₹1,10,400 ಮೊತ್ತವನ್ನು ಅವರ ಹೆಸರಿನಲ್ಲಿ ಸ್ಥಿರ ಠೇವಣಿ (ಎಫ್‌ಡಿ) ರೂಪದಲ್ಲಿ ಜಮೆ ಮಾಡಲಾಗಿದೆ.ಅದರಂರೆ ಲಕ್ಷ್ಮೀ ಶಿವರಾಮ ನಾಯ್ಕ ಅವರ ಪುತ್ರನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶಾಲೆಯೇ ವಹಿಸಿಕೊಂಡಿದೆ. ಎಲ್‌ಕೆಜಿಯಿಂದಲೇ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಪ್ರಸ್ತುತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ವಿದ್ಯಾಭ್ಯಾಸಕ್ಕೂ ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ಶಾಲೆಯ ಆಡಳಿತ ಮಂಡಳಿ ನೀಡಲಿದೆ ಎಂದು ತಿಳಿಸಲಾಗಿದೆ.
ಸಂಕಷ್ಟದ ಸಂದರ್ಭದಲ್ಲೂ ಸಿಬ್ಬಂದಿ ಹಾಗೂ ಅವರ ಕುಟುಂಬದ ಬೆನ್ನಿಗೆ ನಿಲ್ಲುವುದು ಶಾಲೆಯ ಸಾಮಾಜಿಕ ಬದ್ಧತೆಯ ಭಾಗವಾಗಿದೆ. ಲಕ್ಷ್ಮೀ ಶಿವರಾಮ ನಾಯ್ಕ ಅವರ ಸೇವೆ ಶಾಲೆಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದ್ದು, ಅವರ ಕುಟುಂಬದ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಗತ್ಯ ಬೆಂಬಲ ಮುಂದುವರಿಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಸಂದರ್ಭ ಮುಖ್ಯ ಶಿಕ್ಷಕ ಸ್ಯಾಮ್ಯುಯೆಲ್ ವರ್ಗೀಸ್, ಸಹ ಶಿಕ್ಷಕರಾದ ಸಿಜೋ ಸ್ಯಾಮ್ಯುಯೆಲ್, ಸಿಂಟೋ ಸ್ಯಾಮ್ಯುಯೆಲ್, ಚಂದ್ರಾವತಿ ನಾಯ್ಕ, ಜಯಶ್ರೀ ನಾಯ್ಕ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಯೋಧನ್ ಮೊಗೇರ್ ಮತ್ತು ಪಂಚಮಿ ಶೆಟ್ಟಿ ಉಪಸ್ಥಿತರಿದ್ದರು.