ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಾಖಲೆಗಳ ಡಿಜಿಟಲೀಕರಣದಿಂದ ಕೈಗೊಳ್ಳುವ ಕ್ರಮಗಳು ಜನಸ್ನೇಹಿಯಾಗುವ ಬದಲು ದಿನದಿಂದ ದಿನಕ್ಕೆ ಜನವಿರೋಧಿಯಾಗಿ ಬದಲಾಗುತ್ತಿದೆ. ಸಿಬ್ಬಂದಿ ಮಾಡುವ ಎಡವಟ್ಟಿಗೆ ಬೆಲೆ ತೆರಬೇಕಾಗಿರುವ ಸನ್ನಿವೇಶಗಳು ನಡೆಯುತ್ತಿದ್ದು, ಗ್ರಾ.ಪಂ.ಗಳಲ್ಲಿ ಅಳವಡಿಕೆಯಾಗಿರುವ ‘ಪಂಚತಂತ್ರ’ಎಂಬ ಹೆಸರಿನಲ್ಲಿರುವ ತಂತ್ರಾಂಶ ಇದಕ್ಕೊಂದು ಉದಾಹರಣೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದ್ದಾರೆ.ಗ್ರಾ.ಪಂ.ವ್ಯಾಪ್ತಿಯ ಎಲ್ಲ ಸ್ವತ್ತುಗಳ ದಾಖಲೆ, ಸರ್ಕಾರಿ ಜಾಗ, ಗ್ರಾ.ಪಂ.ಗೆ ಬಿಡುಗಡೆಯಾದ ಅನುದಾನ, ಗ್ರಾ.ಪಂ. ಸಭೆಯ ನಡಾವಳಿಗಳು, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ವಿವರ ಎಲ್ಲವನ್ನೂ ಇದರಲ್ಲಿ ನಮೂದಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ತರಲು ಇದು ಉತ್ತಮ ಮಾರ್ಗವೆನ್ನುವುದು ಸರಿ. ಆದರೆ ಲಿಖಿತ ರೂಪದಲ್ಲಿದ್ದ ದಾಖಲೆಗಳನ್ನು ಪಂಚತಂತ್ರ-1ಕ್ಕೆ ಸೇರ್ಪಡೆ ಮಾಡುವಾಗ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ಒಂದು ಗ್ರಾಮದ ಆಸ್ತಿಗಳನ್ನು ಇನ್ನೊಂದು ಗ್ರಾಮಕ್ಕೆ ವರ್ಗಾಯಿಸುವ ಮೂಲಕ ಲೋಪ ಮಾಡಿದ್ದಾರೆ. ಅದರ ಪರಿಣಾಮ ಜನರು ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.ಒಮ್ಮೆ ಲೋಪ ಮಾಡಿದ ಸಿಬ್ಬಂದಿ ಎರಡನೇ ಬಾರಿಯೂ ಎಚ್ಚೆತ್ತುಕೊಳ್ಳಲಿಲ್ಲ. ಪಂಚತಂತ್ರ-2 ತಂತ್ರಾಂಶ ಜಾರಿಗೆ ಬಂದಾಗಲಾದರೂ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ದಾಖಲೆಗಳಿಗೆ ಮುಕ್ತಿ ನೀಡಬಹುದಾಗಿತ್ತು. ಆದರೆ ಆಗಲೂ ಸಿಬ್ಬಂದಿ ನಿರಾಸಕ್ತಿ ಮುಂದುವರೆಸಿ, ಹಳೆಯ ತಪ್ಪುಗಳನ್ನೇ ಈ ತಂತ್ರಾಂಶಕ್ಕೂ ಸೇರಿಸಿ ಎಡವಟ್ಟುಗಳನ್ನು ಮುಂದುವರೆಸಿರುವುದನ್ನು ಗಮನಿಸಿದ್ದೇನೆ.ಮೊದಲೇ ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆ ಎದುರಿಸುತ್ತಿರುವ ಮಲೆನಾಡಿನ ಗ್ರಾಮೀಣ ಭಾಗದ ಜನರಿಗೆ ಇ-ಗವರ್ನೆನ್ಸ್ ಕಂಟಕವಾಗಿ ಪರಿಣಮಿಸಿದೆ. ಇ-ಆಡಳಿತ ವಿಭಾಗ ಇನ್ನೂ ಒಂದು ಹೆಜ್ಜೆ ಮುಂದುವರೆದು, ಗ್ರಾಮೀಣ ಭಾಗದ ಜನರು ಇ-ಸ್ವತ್ತು ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶ ಜಾರಿ ಮಾಡಿದ ಬಳಿಕ ಈ ತಂತ್ರಾಂಶದಲ್ಲಿ ಆಗಿದ್ದ ಲೋಪಗಳು ಒಂದೊಂದಾಗಿ ಹೊರಬರುತ್ತಲೇ ಇವೆ ಎಂದು ಹೇಳಿದ್ದಾರೆ.ಇ-ಸ್ವತ್ತು ಮಾಡಿಸಿಕೊಳ್ಳಲು ಅಡ್ಡಿ:ಗ್ರಾ.ಪಂ. ವ್ಯಾಪ್ತಿಯಲ್ಲಿನ ವಾಸದ ಮನೆ, ವಾಣಿಜ್ಯ ಕಟ್ಟಡ, ನಿವೇಶನಗಳನ್ನು ಈಗ ಇ-ಸ್ವತ್ತು ಮೂಲಕ ನೋಂದಣಿ ಮಾಡಿಕೊಳ್ಳಬೇಕಾದ್ದು ಕಡ್ಡಾಯ. ಆದರೆ ಇಡೀ ಗ್ರಾಮದ ಹೆಸರೇ ‘ಪಂಚತಂತ್ರ’ದಲ್ಲಿ ಸೇರದೇ ಇರುವಾಗ ಇ-ಸ್ವತ್ತು ಸಿಗುವುದಾದರೂ ಹೇಗೆ? ಒಂದು ಹಳ್ಳಿಯ ಅಷ್ಟೂ ಆಸ್ತಿಗಳನ್ನು ಇನ್ನೊಂದು ಗ್ರಾಮದ ಹೆಸರಿಗೆ ವರ್ಗಾಯಿಸಿರುವುದರಿಂದ ಇ-ಸ್ವತ್ತು ಪೋರ್ಟಲ್‌ನಲ್ಲಿ ನೋಂದಣಿ ಸಾಧ್ಯವೇ ಇಲ್ಲ ಎಂದು ದೂರಿದ್ದಾರೆ.ಗ್ರಾಪಂ ಸದಸ್ಯರ ಪರದಾಟ:ಕಳೆದ 10 ವರ್ಷಗಳಲ್ಲಿ ಗ್ರಾ.ಪಂ. ಸದಸ್ಯರಾದ ಬಹುತೇಕರು ‘ಪಂಚತಂತ್ರ’ ತಂತ್ರಾಶದಲ್ಲಿನ ಲೋಪದ ಪರಿಣಾವನ್ನು ಎದುರಿಸಿದ್ದಾರೆ. ನ್ಯೂನತೆ ಸರಿಪಡಿಸಿ ಕೊಳ್ಳಲು ತಾಪಂ ಇಒ, ಜಿಪಂ ಸಿಇಒ ಕಚೇರಿ ಅಲೆದಾಡಿ ಅಂತಿಮವಾಗಿ ಕೈಚೆಲ್ಲಿದ್ದಾರೆ. ಗ್ರಾ.ಪಂ.ಗಳ ಅನೇಕ ಸಭೆಗಳಲ್ಲಿ ನಿರ್ಣಯಗಳನ್ನು ಮಾಡಿ ತಂತ್ರಾಂಶದ ಲೋಪ ಸರಿಪಡಿಸಿ ಇ-ಸ್ವತ್ತು ಮಾಡಿಸಿಕೊಳ್ಳಲು ಅವಕಾಶ ನೀಡಬೇಕೆಂದು ನಿರ್ಣಯ ಕೈಗೊಂಡಿದ್ದಾರೆ. ಆದರೆ ಇದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಆಸಕ್ತಿಯಿಂದ ಕೆಲಸ ಮಾಡಬೇಕಾದ ಇಲಾಖೆಗಳಲ್ಲಿ ನಿರಾಸಕ್ತಿ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.ಇ-ಸ್ವತ್ತಿಗೇಕೆ ಮಹತ್ವ?:ಸರ್ಕಾರದ ಆದೇಶದ ಪ್ರಕಾರ ಇ-ಸ್ವತ್ತು ಮಾಡಿಕೊಳ್ಳದ ಯಾವ ಆಸ್ತಿಯನ್ನೂ ಮಾರಾಟ ಮಾಡುವುದು, ಇಲ್ಲವೇ ಅದನ್ನು ಖರೀದಿಸುವುದು ಸಾಧ್ಯವೇ ಇಲ್ಲ. ಇ-ಸ್ವತ್ತು ಆಗಿದ್ದರೆ ಮಾತ್ರ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಸಾಧ್ಯ. ಇಲ್ಲದೇ ಹೋದರೆ ಖರೀದಿಸಿದ ಆಸ್ತಿಗೆ ಕಾನೂನಿನ ಮಾನ್ಯತೆಯೇ ಸಿಗುವುದಿಲ್ಲ. ತುರ್ತಾಗಿ ಹಣದ ಅವಶ್ಯಕತೆಯಿದ್ದವರು ಅಸ್ತಿ ಮಾರಾಟ ಮಾಡಲು ಇದರಿಂದ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.ಸಮನ್ವಯದ ಕೊರತೆ:ಗ್ರಾ.ಪಂ.ಗಳಲ್ಲಿ ಇ-ಆಡಳಿತ ಸರಿಯಾಗಿ ಅನುಷ್ಠಾನಗೊಳ್ಳಲು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಇ-ಆಡಳಿತ ಇಲಾಖೆ ನಡುವೆ ಸಮನ್ವಯ ಅಗತ್ಯ. ಈಗ ಮೂರು ಇಲಾಖೆಗಳು ಮೂರು ದಿಕ್ಕುಗಳಿಗೆ ಮುಖ ಮಾಡಿವೆ. ದಾಖಲೆಗಳ ತಪ್ಪುಗಳನ್ನು ಸರಿಪಡಿಸಲು ಮೊದಲು ಕಂದಾಯ ಇಲಾಖೆ ದಾಖಲೆಗಳನ್ನು ಸರಿ ಮಾಡಬೇಕು. ಬಳಿಕ ಅದನ್ನು ಇ-ಆಡಳಿತದ ಮೂಲಕ ಸಾಫ್ಟ್ ವೇರ್‌ನಲ್ಲಿ ಅಪ್ ಡೇಟ್ ಮಾಡಬೇಕು. ಅಂತಿಮವಾಗಿ ಪಂಚಾಯತ್ರಾಜ್ ದಾಖಲೆಗಳು ಸರಿಯಾಗಿ ಅನುಷ್ಟಾನವಾಗಬೇಕು. ಈಗ ಇ-ಆಡಳಿತಕ್ಕೆ ತಿದ್ದುಪಡಿಗೆಂದು ಬರುವ ದಾಖಲೆಗಳ ಕಡತಗಳು ಮೂಲೆ ಸೇರುತ್ತಿರುವುದೇ ಸಮಸ್ಯೆಯ ಮೂಲ. ಇದೆಲ್ಲವನ್ನೂ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.ಸಮಸ್ಯೆಯ ವಿಚಾರ ತಮ್ಮ ಗಮನಕ್ಕೆ ಬಂದ ಬಳಿಕ ತೀರ್ಥಹಳ್ಳಿ ತಾಲೂಕು ತ್ರಿಯಂಬಕಪುರ ಗ್ರಾ.ಪಂ.ನ ಅಕ್ಲಾಪುರ, ಶಿವಮೊಗ್ಗ ತಾಲೂಕು ಮಲ್ಲಾಪುರ ಗ್ರಾ.ಪಂ.ನ ಸುತ್ತುಕೋಟೆ, ರಟ್ಟೀಹಳ್ಳಿ, ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ದಾಖಲೆಗಳನ್ನು ಪಂಚತಂತ್ರಕ್ಕೆ ಸೇರಿಸಿ ಅಲ್ಲಿನ ಗ್ರಾಮಸ್ಥರು ಇ-ಸ್ವತ್ತು ಪಡೆಯಲು ಅನುಕೂಲ ಕಲ್ಪಿಸಿದ್ದೇನೆ. ಉಳಿದ ಗ್ರಾಮಗಳ ಸಮಸ್ಯೆಯನ್ನು ಕೂಡ ಫಾಲೋ ಅಪ್ ಮಾಡಿ ಬಗೆಹರಿಸಬೇಕಾಗಿದೆ ಎಂದಿದ್ದಾರೆ.