ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿಗೆ ಗಾಬರಿಗೊಂಡ ಸಿಬ್ಬಂದಿ..!

| Published : Jan 18 2024, 02:00 AM IST

ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿಗೆ ಗಾಬರಿಗೊಂಡ ಸಿಬ್ಬಂದಿ..!
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ತಾಲೂಕು ಕಚೇರಿ, ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ, ಗಾಬರಿಗೊಂಡ ತಹಸೀಲ್ದಾರ್ ಹಾಗೂ ಸಿಬ್ಬಂದಿ. ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ, ಜನರ ಅಹವಾಲು ಆಲಿಕೆ, ಜನರ ಕೆಲಸಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ತಾಕೀತು. ಅಧಿಕಾರಿಗಳು, ಸಿಬ್ಬಂದಿಗೆ ಎಚ್ಚರಿಕೆ.

ಕನ್ನಡಪ್ರಭವಾರ್ತೆ ಮದ್ದೂರುಪಟ್ಟಣದ ತಾಲೂಕ ಕಚೇರಿ ಹಾಗೂ ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ಸಚಿವರ ಭೇಟಿಯಿಂದ ತಹಸೀಲ್ದಾರ್ ಹಾಗೂ ಸಿಬ್ಬಂದಿ ಗಾಬರಿಗೊಂಡ ಪ್ರಸಂಗವು ಜರುಗಿತು.

ಮೈಸೂರಿನಲ್ಲಿ ನಡೆಯಲಿದ್ದ ಇಲಾಖೆ ಪ್ರಗತಿ ಪರಿಶೀಲನೆಗೆ ತೆರಳುತ್ತಿದ್ದ ವೇಳೆ ತಾಲೂಕ ಕಚೇರಿ ಹಾಗೂ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಹಾಗೂ ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ ನಡೆಸುವ ಉದ್ದೇಶದಿಂದ ಸಚಿವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡದೆ ದಿಢೀರ್ ಭೇಟಿ ನೀಡಿದರು.

ಪ್ರಥಮ ಹಂತದಲ್ಲಿ ತಾಲೂಕ ಕಚೇರಿಯ ಇ-ವಿಭಾಗಕ್ಕೆ ತೆರಳಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಜ.5 ರಿಂದ ಹೊಸ ವ್ಯವಸ್ಥೆ ಅಳವಡಿಸುತ್ತಿರುವ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ವ್ಯವಸ್ಥೆ ಪೂರ್ಣಗೊಂಡ ನಂತರ ಕಡತಗಳನ್ನು ದಾಖಲೆ ಮಾಡಿದ ನಂತರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಸೋಮಶೇಖರ್ ಸಚಿವರಿಗೆ ಸ್ಪಷ್ಟಪಡಿಸಿದರು.

ಜಮೀನುಗಳ ಒತ್ತುವರಿ ಸಂಬಂಧ ಅಳತೆ ಕಾರ್ಯಗಳ ಪ್ರಕರಣಗಳು ಬಾಕಿ ಉಳಿದಿರುವ ಬಗ್ಗೆ ತಹಸೀಲ್ದಾರ್ ಹಾಗೂ ಭೂ ಮಾಪನ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರನ್ನು ಸಚಿವ ಕೃಷ್ಣ ಭೈರೇಗೌಡ ತರಾಟೆಗೆ ತೆಗೆದುಕೊಂಡರು. ಜಮೀನುಗಳ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಲೇ ಮಾಡಬೇಕು ಎಂದು ಸೂಚನೆ ನೀಡಿದರು.

ತಾಲೂಕಿನ ಆತಗೂರು ಹೋಬಳಿಯ ಜಮೀನುಗಳ ಮರು ಸರ್ವೆ ಕಾರ್ಯ ವೈಜ್ಞಾನಿಕವಾಗಿ ನಡೆದಿಲ್ಲ. ಈ ಸಂಬಂಧ ಸಂಪೂರ್ಣ ವರದಿ ಪಡೆದ ನಂತರ ಮರು ಸರ್ವೆ ಮಾಡಬೇಕಾಗಿತ್ತು. ಹೀಗಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ಬೇಸರ ವ್ಯಕ್ತಪಡಿಸಿದರು.

ನಂತರ ಕಂದಾಯ ಇಲಾಖೆ ಎಲ್ಲ ವಿಭಾಗಗಳ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು ಸಾರ್ವಜನಿಕರು ವಿನಾಕಾರಣ ಕಚೇರಿಗೆ ಅಲೆದಾಡದಂತೆ ತ್ವರಿತವಾಗಿ ಕೆಲಸಗಳನ್ನು ಪೂರ್ಣಗೊಳಿಸಬೇಕು. ವಿಳಂಬ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಈ ವೇಳೆ ಶಾಸಕ ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಕಾಂಗ್ರೆಸ್ ಮುಖಂಡ ಚಿದಂಬರ್ ಇದ್ದರು.