ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪ್ರಿಯದರ್ಶಿನಿ ಪಿಯು ಕಾಲೇಜು ಗ್ರಾಮೀಣ ಪ್ರದೇಶದ ಬಡಮಕ್ಕಳ ಪಾಲಿನ ಶೈಕ್ಷಣಿಕ ದಾರಿದೀಪ. ಸ್ಮರ್ಧಾತ್ಮಕ ಯುಗಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡುವುದು ಉಪನ್ಯಾಸಕರ ಪ್ರಮುಖ ಕರ್ತವ್ಯ. ತಾಲೂಕಿನ ಸಾಕಷ್ಟು ವಿದ್ಯಾರ್ಥಿಗಳು ಸಾಧಕರಾಗಿ ನಮ್ಮ ದೇಶ ಮತ್ತು ರಾಜ್ಯದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ತಹಸೀಲ್ದಾರ್ ಮಂಜುನಾಥ ಕೆ. ತಿಳಿಸಿದರು.ಪಟ್ಟಣದ ಸಾರಂಗ ಅಕಾಡೆಮಿಯ ಪ್ರಿಯದರ್ಶಿನಿ ಪಿಯು ಕಾಲೇಜು ಆವರಣದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರಂಗ ಅಕಾಡೆಮಿ ಅಧ್ಯಕ್ಷ ಡಿ.ಅಜಯ್ ಕುಮಾರ್ ಮಾತನಾಡಿ, ತಂದೆ- ತಾಯಿ ಮತ್ತು ಶಿಕ್ಷಕರನ್ನು ಗೌರವಿಸುವ ಪಾಠವನ್ನು ಕಾಲೇಜು ಮಕ್ಕಳಿಗೆ ಪ್ರತಿನಿತ್ಯ ಕಲಿಸುತ್ತದೆ. ಜೀವನವು ಕನ್ನಡಿಯ ಹಾಗೆ, ನಾವು ನಕ್ಕರೆ ನಗುತ್ತದೆ, ಅತ್ತರೆ ಅಳುತ್ತದೆ ಅಷ್ಟೆ. ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ರಾಜ್ಯಕ್ಕೇ ರ್‍ಯಾಂಕ್ ಪಡೆಯುವಲ್ಲಿ ಪ್ರಿಯದರ್ಶಿನಿ ಕಾಲೇಜು ಯಶಸ್ವಿ ಮೈಲಿಗಲ್ಲು ಸ್ಥಾಪಿಸಿದೆ. ಪ್ರಸ್ತುತ ವರ್ಷವೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈ ಸಾಧನೆ ಮರುಕಳಿಸುತ್ತಾರೆ ಎಂಬ ನಂಬಿಕೆ ನನ್ನದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಿಯದರ್ಶಿನಿ ಕಾಲೇಜು ಪ್ರಾಂಶುಪಾಲ ಕೆ.ಎನ್.ರುದ್ರೇಶ್ ಮಾತನಾಡಿ, ಉಪನ್ಯಾಸಕರೇ ಕಟ್ಟಿ ಬೆಳೆಸಿದ ಶೈಕ್ಷಣಿಕ ಕಾಲೇಜು ನಮ್ಮ ಹೆಮ್ಮೆಯ ಪ್ರಿಯದರ್ಶಿನಿ. ನಮ್ಮ ಮೇಲೆ ನಂಬಿಕೆ ಇಟ್ಟ ಅಜಯ್ ಸಾಹೇಬ್ರಿಗೆ ಧನ್ಯವಾದ. ಪ್ರಥಮ ವರ್ಷವೇ ೪೦೦ಕ್ಕೂ ಅಧಿಕ ದಾಖಲಾತಿ ಪಡೆದ ಕೊರಟಗೆರೆಯ ಏಕೈಕ ಸಂಸ್ಥೆ ನಮ್ಮದು ಎಂದರು. ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವುದು ನಮ್ಮ ಸಂಸ್ಕೃತಿ ಉಳಿಸುವ ಸಂಕೇತ. ರಾಜ್ಯದ ಟಾಪ್ ಕಾಲೇಜಿನಲ್ಲಿ ನಮ್ಮ ಕಾಲೇಜಿನ ಮಕ್ಕಳು ಉಚಿತ ಸೀಟ್ ಪಡೆಯಲು ನೀಟ್ ಮತ್ತು ಜೆಇಇ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಮಕ್ಕಳ ಸಾಧನೆಗೆ ಪ್ರಿಯದರ್ಶಿನಿ ಕಾಲೇಜು ಶೈಕ್ಷಣಿಕ ದೇವಾಲಯವಿದ್ದಂತೆ. ಬಡಮಕ್ಕಳು ಊಟದಿಂದ ವಂಚಿತರಾದರೂ ಪರವಾಗಿಲ್ಲ. ಆದರೆ ಶಿಕ್ಷಣದಿಂದ ಮಾತ್ರ ವಂಚಿತರಾಗಬಾರದು ಎಂಬ ಧ್ಯೇಯವೇ ನಮ್ಮದು ಎಂದು ಹೇಳಿದರು.
ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ: ೨೦೨೩-೨೪ನೇ ಸಾಲಿನಲ್ಲಿ ರಾಜ್ಯಕ್ಕೆ ೧೦ ಮತ್ತು ೧೧ನೇ ರ್‍ಯಾಂಕ್ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ನೀಟ್ ಹಾಗೂ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾದ ೪೦ಕ್ಕೂ ಅಧಿಕ ವಿದ್ಯಾರ್ಥಿಗಳು, ಆಂಗ್ಲ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ವೈಮಾನಿಕ ಎಸ್.ರಾವ್‌ಗೆ ಪ್ರಿಯದರ್ಶಿನಿ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಿ ವಿಶೇಷವಾಗಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷ ಪರಂಜೀತ್ ಸಿಂಗ್, ಸಾರಂಗ ಅಕಾಡೆಮಿ ಅಧ್ಯಕ್ಷ ಡಿ.ಅಜಯ್, ದೀಪಿಕಾ ಅಜಯ್, ದಮನ್ ಪ್ರೀತ್‌ಸಿಂಗ್, ವ್ಯವಸ್ಥಾಪಕ ರವಿಕುಮಾರ್, ಉಪನ್ಯಾಸಕ ಶ್ರೀನಿವಾಸ್, ಕಾಂತರಾಜು, ಶ್ರೀರಂಗಯ್ಯ, ಭರತ್, ಪ್ರಮೋದ್, ಮಲ್ಲಿ, ಶಶಿರೇಖಾ, ನಯನ, ಗುಲಾಫ್ ಶಾ, ನಟರಾಜು ಸೇರಿದಂತೆ ಇತರರು ಇದ್ದರು.
ಸಿನಿ ತಾರೆಗಳ ಸಮಾಗಮ:ಸಾರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರ್ಜುನ್ ಯೋಗಿ, ಡಿಕೆಡಿ ಖ್ಯಾತಿಯ ಗಿಲ್ಲಿನಟ, ಕರ್ನಾಟಕ ಕೋಗಿಲೆ ವಿಜೇತ ಖಾಸೀ ಅಲಿಂ ಸಂಜೆ ೮ ಗಂಟೆಯಿಂದ ತಡರಾತ್ರಿ ೧೧ರ ತನಕ ನೃತ್ಯ, ಸಂಗೀತ ಮತ್ತು ಹಾಸ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಪೋಷಕರನ್ನು ರಂಜಿಸಿದರು.