ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದ ಜೊತೆಗೆ ಈಗ ಸಂಸ್ಥೆ ಲೋಕಸೇವೆ ಆಯೋಗದ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಲು ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದ ಜೊತೆಗೆ ಈಗ ಸಂಸ್ಥೆ ಲೋಕಸೇವೆ ಆಯೋಗದ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಲು ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

ನಗರದ ಬಿ.ಎಲ್.ಡಿ.ವಿ ಡೀಮ್ಡ್ ವಿವಿ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಎಸ್, ಐಪಿಎಸ್ ಸೇರಿದಂತೆ ನಾನಾ ಸರ್ಕಾರಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದರಿಂದ ಅನುಕೂಲವಾಗಲಿದೆ. ಈ ಒಪ್ಪಂದಿಂದಾಗಿ ಸಾಧನಾ ಕೋಚಿಂಗ್ ಸೆಂಟರ್‌ನ ಪರಿಣಿತ ಶಿಕ್ಷಕರು ಮತ್ತು ಅವರು ಸಂಗ್ರಹಿಸಿರುವ ಪರೀಕ್ಷೆಗೆ ಪೂರಕವಾಗಿರುವ ಸಾಹಿತ್ಯ ಸಂಗ್ರಹ, ಅಧ್ಯಯನ ಸಾಮಗ್ರಿಗಳು, ಪರೀಕ್ಷಾ ಸರಣಿಯ ಉತ್ತರ ಪ್ರತಿಗಳ ಜೊತೆಗೆ ಸತತ ಮಾರ್ಗದರ್ಶನ ಮಾಡುತ್ತ ನಿರಂತರವಾಗಿ ಸಂಪರ್ಕದಲ್ಲಿರಲಿದ್ದಾರೆ. ಬಿ.ಎಲ್.ಡಿಇ ಸಂಸ್ಥೆ ಇದಕ್ಕೆ ಪೂರಕವಾಗಿ ಶೈಕ್ಷಣಿಕ ಮೂಲಸೌಲಭ್ಯ ಒದಗಿಸಲಿದೆ. ವಿದ್ಯಾರ್ಥಿಗಳು ಏಕಕಾಲದಲ್ಲಿ ಪದವಿಯ ಓದುವುದರ ಜೊತೆಗೆ ಪ್ರಾರಂಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಇ ಮತ್ತು ಕೆಪಿಎಸ್ಇ ಪರೀಕ್ಷೆಗಳ ತರಬೇತಿಯನ್ನೂ ಪಡೆಯಲಿದ್ದಾರೆ. ಈ ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಚರ್ಚೆಗಳು, ಗುಂಪು ಚರ್ಚೆ, ಅಣಕು ಸಂದರ್ಶನಗಳು ನಡೆಯಲಿವೆ. ಇದರಿಂದ ಪದವಿ ನಂತರ ತರಬೇತಿ ಪಡೆಯುವ ಒತ್ತಡ ಕಡಿಮೆಯಾಗಿ ಸಮಯದ ಉಳಿತಾಯವಾಗಲಿದೆ. ಅಲ್ಲದೇ, ಪದವಿ ಪಡೆದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಅವರಾಶ ಸಿಗಲಿದೆ. ಪ್ರಾರಂಭಿಕ ಹಂತದಲ್ಲಿಯೇ ಯುವಕರು ತಮ್ಮ ಕನಸು ನನಸು ಮಾಡಲು ಅನುಕೂಲವಾಗಲಿದೆ ಎಂದರು.ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು 1910ರಲ್ಲಿ ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಳೆದ 115 ವರ್ಷಗಳಲ್ಲಿ ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ಶಿಕ್ಷಣ ತಜ್ಞ ಶ್ರೀ ಬಿ.ಎಂ.ಪಾಟೀಲ ಅವರ ಕೊಡುಗೆ ಅಪಾರ. ಅವರ ಆಶಯಗಳಿಗೆ ತಕ್ಕಂತೆ ಈಗ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಸಮರ್ಥ ಮುಂದಾಳತ್ವ ವಹಿಸಿ ಮಹನೀಯರ ಆಶಯಕ್ಕೆ ತಕ್ಕಂತೆ ಈ ಭಾಗ ಜನರಿಗೆ ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ನಿರ್ದೇಶಕಿ ಡಾ.ಜ್ಯೋತಿ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ತಮ್ಮ ಕೇಂದ್ರ 14 ವರ್ಷಗಳನ್ನು ಪೂರೈಸಿದೆ. ಈಗಾಗಲೇ ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಂಯೋಜಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಅನೇಕ ವಿದ್ಯಾರ್ಥಿಗಳಿಗೆ ವೃತ್ತಿ ರೂಪಿಸಿಕೊಳ್ಳಲು ನೆರವಾಗಿದೆ. ಇಲ್ಲಿ ಈ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದಿರುವ ಹಲವಾರು ಜನರು ಈಗಾಗಲೇ ಯುಪಿಎಸ್ಇ, ಕೆಪಿಎಸ್ಇ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ ಉಪಸ್ಥಿತರಿದ್ದರು.ಒಡಂಬಡಿಕೆಗೆ ಸಹಿಹಾಕಿದ ಎಂಎಲ್ಸಿ ಸುನೀಲಗೌಡ

ಯುಪಿಎಸ್‌ಇ ಪರೀಕ್ಷೆ ತರಬೇತಿ ಪಡೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮತ್ತು ಬದ್ಧವಾಗಿರುವ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯದಲ್ಲಿ ನಾಗರಿಕ ಸೇವಾ ತರಬೇತಿ ನೀಡುವಲ್ಲಿ ಹೆಸರಾಗಿರುವ ಸಾಧನಾ ಕೊಂಚಿಂಗ್ ಸೆಂಟರ್ ಈ ಭಾಗದ ಯುವಕರ ಕನಸು ನನಸು ಮಾಡಲು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಪರವಾಗಿ ನಿರ್ದೇಶಕಿ ಜ್ಯೋತಿ ಒಡಂಬಡಿಕೆಗೆ ಸಹಿ ಹಾಕಿದರು.