ಸರ್ಕಾರಿ ಜಾಗ ರಕ್ಷಣೆಗೆ ಪಣ

| Published : Jul 10 2024, 12:31 AM IST

ಸಾರಾಂಶ

‘ಗೋಮಾಳ ಸೇರಿದಂತೆ ಎಲ್ಲಾ ಮಾದರಿ ಸರ್ಕಾರಿ ಜಾಗಗಳನ್ನು ಈ ವರ್ಷಾಂತ್ಯದೊಳಗೆ ಸರ್ವೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಗೋಮಾಳ ಸೇರಿದಂತೆ ಎಲ್ಲಾ ಮಾದರಿ ಸರ್ಕಾರಿ ಜಾಗಗಳನ್ನು ಈ ವರ್ಷಾಂತ್ಯದೊಳಗೆ ಸರ್ವೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು. ರಾಜ್ಯದಲ್ಲಿ ಒಟ್ಟಾರೆ ಎಷ್ಟು ಸರ್ಕಾರಿ ಜಮೀನಿದೆ ಎಂಬ ಬಗ್ಗೆ ಲ್ಯಾಂಡ್‌ ಬ್ಯಾಂಕ್‌ ತಯಾರಿಸಿ, ಪ್ರತಿ ತಾಲ್ಲೂಕಲ್ಲೂ ಸರ್ಕಾರಿ ಜಮೀನು ಎಷ್ಟಿದೆ ಎಂಬುದನ್ನು ಆಯಾ ತಹಶೀಲ್ದಾರರ ಕಚೇರಿಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟಾಜ್ಞೆ ವಿಧಿಸಿದ್ದಾರೆ.ಮಂಗಳವಾರ ಕೂಡ ಬೆಳಗ್ಗೆಯಿಂದ ರಾತ್ರಿವರೆಗೂ ಇಡೀ ದಿನ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಯವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಶೇ.75ರಷ್ಟು ಸರ್ಕಾರಿ ಜಾಗಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ಶೇ.25ರಷ್ಟು ಜಾಗಗಳ ಸರ್ವೆ ಕಾರ್ಯವನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಿ ರಾಜ್ಯದಲ್ಲಿ ಒಟ್ಟಾರೆ ಎಷ್ಟು ಸರ್ಕಾರಿ ಜಾಗವಿದೆ ಎಂಬ ಲ್ಯಾಂಡ್‌ ಬ್ಯಾಂಕ್‌ ಮಾಡಿ ಸಲ್ಲಿಸಬೇಕು. ಪ್ರತೀ ತಾಲ್ಲೂಕಿನ ತಹಶೀಲ್ದಾರರ ಕಚೇರಿಯಲ್ಲೂ ತಮ್ಮ ತಾಲ್ಲೂಕಿನಲ್ಲಿರುವ ಸರ್ಕಾರಿ ಜಾಗ ಎಷ್ಟು ಎಂಬ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ಸರ್ವೆ ಕಾರ್ಯಕ್ಕೆ 750 ಸರ್ವೆಯರ್‌ಗಳ ನೇಮಕಾತಿಗೆ ಆದೇಶಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ನೇಮಕಾತಿಗೂ ಕ್ರಮ ವಹಿಸಲಾಗುವುದು ಎಂದರು.ವಕ್ಫ್‌ ಆಸ್ತಿ ಒತ್ತುವರಿ ತೆರವು ಮಾಡಿ:

ವಕ್ಫ್‌ ಆಸ್ತಿ ಒತ್ತುವರಿ ತೆರವು ಕಾರ್ಯಕ್ಕೆ ವೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು. ರಾಜ್ಯದಲ್ಲಿ ವಕ್ಫ್‌ಗೆ ಸಂಬಂಧಿಸಿದ 217 ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿ ಉಳಿದಿದ್ದು, ಶೀಘ್ರದಲ್ಲಿ ಒತ್ತುವರಿ ತೆರವು ಮಾಡಿ. ಹಾಗೆಯೇ, 22,581 ವಕ್ಫ್‌ ಖಾತೆ ಮ್ಯುಟೇಶನ್‌ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಬೇಕು ಎಂದು ಸಿಎಂ ನಿರ್ದೇಶಿಸಿದರು.==

ಡೆಂಘೀ ತಡೆಗೆ ಜಿಲ್ಲಾ ಕಾರ್ಯಪಡೆರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳ ತಡೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ಜಿಲ್ಲಾಸ್ಪತ್ರೆಗಳಲ್ಲೂ ಡೆಂಘೀ ಚಿಕಿತ್ಸೆಗೆ 10 ಬೆಡ್‌ಗಳ ವಿಶೇಷ ವಾರ್ಡ್‌ ಸಜ್ಜುಗೊಳಿಸಬೇಕು ಎಂದು ಸೂಚಿಸಿದ್ದಾರೆ.