ಸಾರಾಂಶ
ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಾಣ ಸ್ವಾಮಿ ಅವರು ಗುರುವಾರ ತಾಲೂಕಿನ ಹೊನಗೇರಾ ಗ್ರಾಮದ ಮೃತ ಶಿವಲಿಂಗ ಕುಂಬಾರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಶಿವಲಿಂಗ ಮೃತಪಟ್ಟಿದ್ದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಾಣ ಸ್ವಾಮಿ ಅವರು ಗುರುವಾರ ತಾಲೂಕಿನ ಹೊನಗೇರಾ ಗ್ರಾಮದ ಮೃತ ಶಿವಲಿಂಗ ಕುಂಬಾರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಶಿವಲಿಂಗ ಮೃತಪಟ್ಟಿದ್ದರು.ಈ ಹಿನ್ನೆಲೆಯಲ್ಲಿ ಛಲವಾದಿ ಅವರು, ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿ, ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಮೃತ ಶಿವಲಿಂಗನ ಕುಟುಂಬ ಬಡತನದಲ್ಲಿದೆ. ಕೂಲಿ ಮಾಡಲು ಬೆಂಗಳೂರಿಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಈಗ ನೋಡಿದರೆ ಇಂತಹ ದುರ್ಘಟನೆ ನಡೆದಿದೆ. ಈ ಕುಟುಂಬಕ್ಕೆ ಸರ್ಕಾರಿ ಭೂಮಿ ಕೊಡಬೇಕು. ಪಂಚಾಯಿತಿಯಿಂದ ಮನೆ ನೀಡಬೇಕು, ಇರುವ ಇನ್ನೊಬ್ಬ ಮಗನಿಗೆ ನೌಕರಿ ಕೊಡಿಸಬೇಕೆಂದು ಕೇಳಿದರು. ಮುಖ್ಯವಾಗಿ ಊರಲ್ಲಿ ಸ್ಮಶಾನದ ಭೂಮಿ ಇಲ್ಲ, ಅದರ ವ್ಯವಸ್ಥೆ ಇಲ್ಲ, ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಹೇಳಿದರು. ಆಗ ಕೂಡಲೇ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಈ ಎಲ್ಲ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಪರಶುರಾಮ ಕುರಕುಂದಾ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ, ಮೌನೇಶ ಬೆಳಗೇರಾ, ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ವಿಲಾಸ ಪಾಟೀಲ್, ಗುರುಮಠಕಲ್ ಮಂಡಲ ಅಧ್ಯಕ್ಷ ನರಸಿಂಹಲುನಿರೇಟಿ, ಗುರು ಪೊಲೀಸ್ ಪಾಟೀಲ, ಶರಣಪ್ಪ ಮೋಟನಳ್ಳಿ ಮುಂತಾದವರಿದ್ದರು.