ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಜನ ಅಮಾಯಕರ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆರ್‌ಸಿಬಿ ಗೆದ್ದ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಪೊಲೀಸ್ ಭದ್ರತೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರವು ಗೌರವ ಕೊಡುವ ಸಂಬಂಧ ಎರಡು ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಗಳು ಬೇಡವೆಂದು ಪೊಲೀಸ್ ಇಲಾಖೆ ಪತ್ರದ ಮೂಲಕ ತಿಳಿಸಿದರೂ ಮುಖ್ಯಮಂತ್ರಿಯವರು ಕಾರ್ಯಕ್ರಮ ಮಾಡಬೇಕು. ಆಟಗಾರರಿಗೆ ಗೌರವ ಕೊಡಬೇಕು ಎಂದು ಸೂಚಿಸಿದರು. ಅದು ಅವರಿಗೆ ಗೌರವ ಕೊಡುವ ಕಾರ್ಯಕ್ರಮವಾಗಿರಲಿಲ್ಲ. ಆಟಗಾರರನ್ನು ಅವಮಾನಿಸುವ ಕಾರ್ಯಕ್ರಮವಾಗಿತ್ತು ಎಂದು ಟೀಕಿಸಿದರು.ಒಂದು ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಸೇರಿದ್ದರೂ ವಿಧಾನಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮ ನೋಡಲು ಆಗಲಿಲ್ಲ. ಇದೊಂದು ಪ್ರಚಾರಕ್ಕೆಂದೇ ಮಾಡಿರುವ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿದ ಅವರು, ಮಧ್ಯಾಹ್ನ ಸುಮಾರು 3 ಗಂಟೆಗೆ ಕಾಲ್ತುಳಿತದಿಂದ ಒಂದು ಸಾವಾಗಿದ್ದು, ಮುಖ್ಯಮಂತ್ರಿಗಳಿಗೆ ಆ ವಿಷಯವು ಸಂಜೆ 5 ಗಂಟೆಗೆ ತಿಳಿಯುತ್ತದೆ ಎಂದರೆ ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ವಿಧಾನ ಸೌಧದ ಮುಂದೆ ಮೊದಲು ಎಲ್ಲ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸುವ ಬದಲು ತರಾತುರಿಯಲ್ಲಿ ಆಯೋಜಿಸಿದ್ದಾರೆ. ಈ ಮೂಲಕ 11 ಜನರ ಬಲಿಯನ್ನು ಕಾಂಗ್ರೆಸ್ ಸರ್ಕಾರವು ಪಡೆದಿದೆ. ಸರ್ಕಾರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಭದ್ರತೆಯ ವೈಫಲ್ಯ ಎಂದು ಅವರನ್ನು ಅಮಾನತುಗೊಳಿಸಿದ್ದಾರೆ. ಈ ಕೂಡಲೇ ಸಿಎಂ, ಡಿಸಿಎಂ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ, ಕಾರ್ಯಕ್ರಮ ಆಯೋಜಿಸುವ ಮೊದಲು ಪೊಲೀಸ್ ಭದ್ರತೆ, ಇನ್ನಿತರೆ ಸಿದ್ಧತೆಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ತೆಗೆದುಕೊಂಡಿಲ್ಲ? ಡಿಪಿಎಆರ್ ಕಾರ್ಯದರ್ಶಿಯವರು ಮಾಧ್ಯಮದ ಮೂಲಕ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನಾವು ಕಾರ್ಯಕ್ರಮ ರೂಪಿಸಿದ್ದೇವೆ. ದಯವಿಟ್ಟು ಸಾರ್ವಜನಿಕರು ಸ್ಟೇಡಿಯಂಗೆ ಬರಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ. ಅದೇ ರೀತಿ ಡಿಸಿಎಂ ಶಿವಕುಮಾರ ಅವರು ಕೂಡ ಹೇಳಿದ್ದಾರೆ. ಆದರೆ ಆರ್‌ಸಿಬಿ ತಂಡವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ಅವರನ್ನು ಬಂಧಿಸಿದ್ದಾರೆ. ಮೇಲೆ ಹೇಳಿಕೆ ನೀಡಿರುವವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ರಾಜಶೇಖರ್ ಡೋಣಿ, ಮಲ್ಲಿಕಾರ್ಜುನ ಮಾದಮ್ಮನವರ, ಉಜ್ವಲಾ ಬಡವನಾಚೆ, ಮುರುಘೇಂದ್ರಗೌಡ ಪಾಟೀಲ, ಮಾಧ್ಯಮ ಪ್ರಮುಖರಾದ ಸಚಿನ್ ಕಡಿ, ಹನುಮಂತ ಕೊಂಗಾಲಿ, ದಾದಾಗೌಡ ಬಿರಾದಾರ ಮೊದಲಾದವರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))