ದುಷ್ಟ ನಿಗ್ರಹ, ಶಿಷ್ಟ ಪರಿಪಾಲನೆ ಸಂದೇಶವು ಈ ದಸರಾ ಆಚರಣೆಯಲ್ಲಿ ಹಾಗೂ ಶ್ರೀದೇವಿ ಪುರಾಣದಲ್ಲಿ ವ್ಯಾಪಕವಾಗಿ ಪ್ರತಿಪಾದಿಸಲ್ಪಟ್ಟಿದೆ.

ಕನ್ನಡಪ್ರಭ ವಾರ್ತೆ ಗದಗ

ದುಷ್ಟ ನಿಗ್ರಹ, ಶಿಷ್ಟ ಪರಿಪಾಲನೆ ಸಂದೇಶವು ಈ ದಸರಾ ಆಚರಣೆಯಲ್ಲಿ ಹಾಗೂ ಶ್ರೀದೇವಿ ಪುರಾಣದಲ್ಲಿ ವ್ಯಾಪಕವಾಗಿ ಪ್ರತಿಪಾದಿಸಲ್ಪಟ್ಟಿದೆ. ಅದನ್ನೇ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಸಹಾಯಕರಿಗೆ ಸಹಾಯಕರಾಗಿ ನಿಂತು ಕಾಯಕ ಮಾಡಬೇಕು. ಅಂದಾಗಲೇ ದಸರಾ ಆಚರಣೆ ಸಾರ್ಥಕವಾಗುತ್ತದೆ ಎಂದು ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ. ರುದ್ರಮ್ಮ ಜೆ. ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಘಟಸ್ಥಾಪನೆ ಹಾಗೂ 46ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿದರು.

ಹೆಣ್ಣುಮಕ್ಕಳು ಈ ಜಗದ ಕಣ್ಣು. ಹೆಣ್ಣುಮಕ್ಕಳು ಧರ್ಮದ, ಮುತ್ತೈದೆ ಭಾಗ್ಯದ ತಿರುಳನ್ನು, ಅದರ ತತ್ವವನ್ನು ಪ್ರತಿವರ್ಷ ದಸರಾ ಸಂದರ್ಭದಲ್ಲಿ ನೆನಪಿಸಿಕೊಟ್ಟು ತಾಯಂದಿರ ಜೀವನ ಪಾವನವಾಗುವ ಹಾಗೆ ಈ ಮಠದಲ್ಲಿ ಅನೇಕ ವಿಧಾಯಕ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ಇಂದಿನ ದಿನಮಾನಗಳಲ್ಲಿ ಗಾಢವಾಗಿ ಪಸರಿಸುತ್ತಿರುವ ಈ ಸಂದರ್ಭ ಜನರಲ್ಲಿ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿತ್ತಿ ಬೆಳೆಯುವಂತೆ ಪ್ರತಿವರ್ಷ ಪುರಾಣ ಪ್ರವಚನದ ಮೂಲಕ ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ತಿಳಿಸಿದರು.

ಶಿವಾನುಭವಗೋಷ್ಠಿ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಮಾತನಾಡಿ, ಒಂದೂವರೆ ಶತಮಾನದ ಇತಿಹಾಸ ಹಾಗೂ ಸುದೀರ್ಘವಾದ ಪರಂಪರೆ ಹೊಂದಿರುವ ಶ್ರೀಅಡವೀಂದ್ರಸ್ವಾಮಿ ಮಠವು ಧರ್ಮ ಜಾಗೃತಿ, ಧರ್ಮ ಪ್ರಜ್ಞೆಯ ಜೊತೆಗೆ ಸಮಾಜವನ್ನು ಜಾತ್ಯತೀತ ಮನೋಭಾವನೆಯಿಂದ ಕಂಡು ಪುರಾಣ, ಶಿವಾನುಭವ, ಜಾತ್ರೆಗಳಲ್ಲಿ ಧಾರ್ಮಿಕತೆಯ ವಿಚಾರ ಭೋಧನೆಗಳಂತಹ ಸಾತ್ವಿಕತೆಗಳನ್ನು ತನ್ನ ಅಂಗವಾಗಿಸಿಕೊಂಡು ತನ್ನ ಹೊಣೆಗಾರಿಕೆಯನ್ನು ಬಹುಮುಖಿಯಾಗಿ ವಿಸ್ತರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗದಗ ಶಿವಾನಂದ ಬ್ರಹನ್ಮಠದ ಜಗದ್ಗುರು ಶ್ರೀಸದಾಶಿವಾನಂದ ಸ್ವಾಮಿಗಳು, ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹಾಗೂ ಶ್ರೀದೇವಿ ಪುರಾಣ ಪ್ರವಚನಕಾರ ಡಾ. ಪಂ. ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿದರು.

ಈ ವೇಳೆ ಜಿಮ್ಸ್ ಪ್ರಾಧ್ಯಾಪಕರಾದ ಡಾ. ಮಹಾಂತೇಶ ಪಾಟೀಲ, ಡಾ. ರೂಪಾ ಪಾಟೀಲ, ಜಾತ್ರಾಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ, ಸುವರ್ಣಾ ಮದರಿಮಠ, ಅಧ್ಯಕ್ಷ ಸಂತೋಷ ಕಬಾಡರ, ಪ್ರಕಾಶ ಅಕ್ಕಿ, ವಿನಾಯಕ ಪಾಟೀಲ, ಶಿವಪ್ರಭು ನೀಲಗುಂದ, ಪ್ರಭುಗೌಡ ಪಾಟೀಲ, ಶಿವಲೀಲಾ ಅಕ್ಕಿ, ಅನ್ನಪೂರ್ಣೇಶ್ವರಿ ಕಬಾಡರ, ಅಶ್ವಿನಿ ನೀಲಗುಂದ, ಅಮೃತಾ ವಾರಕರ, ವೇದಾ ಬಿದರೂರ, ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಸೇರಿ ಇತರರು ಇದ್ದರು. ಬಸವರಾಜ ಬ್ಯಾಹಟ್ಟಿ ಸ್ವಾಗತಿಸಿದರು. ಜಯಶ್ರೀ ವಸ್ತ್ರದ ವಂದಿಸಿದರು.