ಸಾರಾಂಶ
ಕಂದಾಯ ಇಲಾಖೆಯಿಂದ ಜಮೀನುಗಳಿಗೆ ಸಮಸ್ಯೆಗಳಾಗಿದ್ದರೆ ಸಂಬಂಧಿಸಿದ ರೈತರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕೋರ್ಟ್ ಅಥವಾ ಸಾಮಾನ್ಯ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ರೈತರ ಜಮೀನಿನ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿ ಸಮಸ್ಯೆಯಾದರೆ ವಕ್ಫ್ ನ್ಯಾಯ ಮಂಡಳಿಗೇ ಹೋಗಬೇಕು. ಇದು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡೋಣ. ಉಳಿದಂತೆ ಯಾವುದೇ ರಾಜಕೀಯ ಬೇಡ. ಗ್ರಾಮದ ರೈತ ಸೋಮಶೇಖರ್ ಹಾಗೂ ಗ್ರಾಮಕ್ಕೆ ಆಗಿರುವ ಅನ್ಯಾಯದ ಬಗ್ಗೆ ಎಲ್ಲರೂ ಒಟ್ಟಾಗಿ ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ನಡೆಸುವಂತೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.ಶ್ರೀರಂಗಪಟ್ಟಣದ ಕೊತ್ತತ್ತಿ ಗ್ರಾಮದ ಸರ್ಕಾರಿ ಗುಂಡುತೋಪು ಮತ್ತು ರೈತರ ಜಮೀನು ಸೇರಿ 3 ಎಕರೆ ಜಮೀನು ವಕ್ಫ್‌ಗೆ ಖಾತೆಯಾಗಿರುವುದರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಂದಾಯ ಇಲಾಖೆಯಿಂದ ಜಮೀನುಗಳಿಗೆ ಸಮಸ್ಯೆಗಳಾಗಿದ್ದರೆ ಸಂಬಂಧಿಸಿದ ರೈತರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕೋರ್ಟ್ ಅಥವಾ ಸಾಮಾನ್ಯ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ರೈತರ ಜಮೀನಿನ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿ ಸಮಸ್ಯೆಯಾದರೆ ವಕ್ಫ್ ನ್ಯಾಯ ಮಂಡಳಿಗೇ ಹೋಗಬೇಕು. ಇದು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನಾಗಿದೆ. ರೈತರಿಗೆ ಆಗಿರುವ ಅನ್ಯಾಯ. ಜನರ ಧಾರ್ಮಿಕ ಭಾವನೆಗಳಿಗೆ ಆಗಿರುವ ಧಕ್ಕೆಯಾಗಿದೆ. ತಕ್ಷಣವೇ ಈ ಕಾಯಿದೆ ರದ್ದಾಗಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಈ ಅನ್ಯಾಯದ ಕಾನೂನು ಜಾರಿಗೆ ಬಂದಿದೆ. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರೇ ಈಗಲೂ ಅಧಿಕಾರದಲ್ಲಿದ್ದಾರೆ. ನಾವು ಶಾಲು, ಹಾರ ಹಾಕಿದರೆ ನಿರಾಕರಿಸುತ್ತಾರೆ. ಇಲ್ಲವೇ ಕಿತ್ತು ಎಸೆಯುತ್ತಾರೆ. ಆದರೆ, ಮುಸಲ್ಮಾನರು ಟೋಪಿ, ಶಾಲು ಹಾಕಿಸಿದರೆ ಹಾಕಿಸಿಕೊಳ್ಳುತ್ತಾರೆ. ಈ ಮೂಲಕ ತಾವು ಒಂದು ಕೋಮುವಿನ ಪರ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪದೇ ಪದೇ ತಾನು ಹಿಂದೂ ಮತ್ತು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ. ರೈತ ಕುಲದ ನಿರ್ನಾಮಕ್ಕೆ ವಕ್ಫ್ ಬೋರ್ಡ್ ಹೆಸರಿನಲ್ಲಿ ಮುನ್ನುಡಿ ಬರೆದಿದೆ. ರೈತರ ಜಮೀನು, ಸರ್ಕಾರಿ ಶಾಲೆ, ದೇವಾಲಯದ ಆಸ್ತಿಯನ್ನು ವಕ್ಫ್ ಬೋರ್ಡ್ ಕಬಳಿಸಲು ಮುಖ್ಯಮಂತ್ರಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂಷಿಸಿದರು.ಕ್ಷೇತ್ರದಲ್ಲಿ ರೈತರಿಗೆ ಇಷ್ಟೆ ಅನ್ಯಾಯ ಆಗುತ್ತಿದ್ದರೂ ಕೂಡ ಶಾಸಕರು ಈ ಬಗ್ಗೆ ರೈತರಪರ ನಿಲ್ಲದೆ ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಕಿಡಿಕಾರಿದರು.
ಜಮೀನು ಮಾಲೀಕ ಸೋಮಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಜವರೇಗೌಡ, ಸದಸ್ಯ ಚೇತನ್, ಉದ್ಯಮಿ ಮಹೇಶ, ತಾಪಂ ಮಾಜಿ ಉಪಾಧ್ಯಕ್ಷ ಭಾಸ್ಕರ್, ಜಿ ಬಿಜೆಪಿ ಉಪಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಗ್ರಾಮದ ಮುಖಂಡರಾದ ಸುಖೇಂದ್ರ, ಪ್ರದೀಪ ಇತರರಿದ್ದರು.