ಸಾರಾಂಶ
ಜ್ವರ ಬಳಲಿಕೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸದ ಕಾರಣ, ವೈದ್ಯರ ಸಲಹೆ ಮೇರೆಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಾಲ್ಕುದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಆದರೆ, ದೂರುದಾರರು ಒಳರೋಗಿಯಾಗಿ ಚಿಕಿತ್ಸೆ ಪಡೆಯುವುದು ಅವಶ್ಯಕತೆ ಇರಲಿಲ್ಲ ಎಂದು ವಿಮಾ ಕ್ಲೇಮ್ ತಿರಸ್ಕರಸಿತ್ತು.
ಧಾರವಾಡ:
ವಕೀಲರೊಬ್ಬರ ಆರೋಗ್ಯ ವಿಮೆ ತಿರಸ್ಕರಿಸಿದ ಸ್ಟಾರ್ ಹೆಲ್ತ್ ವಿಮಾ ಕಂಪನಿಗೆ ದಂಡ ವಿಧಿಸಿ, ಪರಿಹಾರಕ್ಕೆ ಗ್ರಾಹಕರ ನ್ಯಾಯಾಲಯವು ಆದೇಶಿಸಿದೆ.ಧಾರವಾಡದ ನಿವಾಸಿ, ವಕೀಲ ಶಿವರಾಜ ಮುಧೋಳ ತಮ್ಮ ಮತ್ತು ಪತಿ ಸೀಮಾ ಸ್ಟಾರ್ ಹೆಲ್ತ್ ವಿಮಾ ಕಂಪನಿಯಲ್ಲಿ ₹ 31,395 ಪ್ರೀಮಿಯಮ್ ಹಣ ಪಾವತಿಸಿ 2023ರ ಜೂ. 6ರಿಂದ 2024ರ ಜೂ. 6ರ ವರೆಗೆ ಆರೋಗ್ಯ ವಿಮೆ ಪಡೆದಿದ್ದರು. 2023ರ ನ. 1ರಂದು ಜ್ವರ ಬಳಲಿಕೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸದ ಕಾರಣ, ವೈದ್ಯರ ಸಲಹೆ ಮೇರೆಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಾಲ್ಕುದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಅವರ ಚಿಕಿತ್ಸೆಯ ವೆಚ್ಚ ₹ 21,722 ಆಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಚಿಕಿತ್ಸೆಯ ಖರ್ಚನ್ನು ಪಾವತಿಸುವಂತೆ ಎದುರುದಾರರಿಗೆ ದಾಖಲೆ ಸಮೇತ ವಿಮಾ ಕ್ಲೇಮನ್ನು ಕಳುಹಿಸಿದ್ದರು.
ದೂರುದಾರರು ಒಳರೋಗಿಯಾಗಿ ಚಿಕಿತ್ಸೆ ಪಡೆಯುವುದು ಅವಶ್ಯಕತೆ ಇರಲಿಲ್ಲ ಎಂದು ವಿಮಾ ಕ್ಲೇಮ್ ತಿರಸ್ಕರಿಸಲಾಗಿತ್ತು. ವಿಮಾ ಕಂಪನಿಯ ಈ ನಡುವಳಿಕೆ ಪ್ರಶ್ನಿಸಿ ಶಿವರಾಜ ಅವರು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ವೈದ್ಯರ ಸಲಹೆ ಮೇರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದು ದಾಖಲೆಗಳಿಂದ ರುಜುವಾತಾಗಿದೆ. ಆ ಅವಧಿಯಲ್ಲಿ ಎದುರುದಾರರು ನೀಡಿರುವ ವಿಮಾ ಪಾಲಸಿ ಚಾಲ್ತಿಯಲ್ಲಿದೆ. ಆ ಕಾರಣದಿಂದ ದೂರುದಾರರ ವೈದ್ಯಕೀಯ ವೆಚ್ಚ ಭರಿಸುವುದು ವಿಮಾ ಕಂಪನಿಯ ಕರ್ತವ್ಯ. ಆದರೆ, ವೈದ್ಯಕೀಯ ಖರ್ಚು ಸಂದಾಯ ಮಾಡಲು ವಿಮಾ ಕಂಪನಿ ವಿಫಲವಾಗಿದ್ದು, ಕರ್ತವ್ಯ ಲೋಪ ಎತ್ತಿ ತೋರಿಸುತ್ತದೆ ಎಂದು ಆಯೋಗ ತೀರ್ಪು ನೀಡಿದೆ. ದೂರುದಾರರ ಚಿಕಿತ್ಸಾ ವೆಚ್ಚ ₹ 21,722 ಮತ್ತು ಅದರ ಮೇಲೆ ವಿಮಾ ತಿರಸ್ಕರಿಸಿದ ದಿನಾಂಕದಿಂದ ಶೇ. 10ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಸಂದಾಯ ಮಾಡಲು ಆಯೋಗ ಎದುರುದಾರ ಸ್ಟಾರ ಹೆಲ್ತ್ ವಿಮಾ ಕಂಪನಿಗೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ತೊಂದರೆಗಾಗಿ ₹ 50 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವೆಂದು ₹ 10 ಸಾವಿರ ಕೊಡುವಂತೆ ಆಯೋಗ ಸ್ಟಾರ್ ಹೆಲ್ತ್ ಇನ್ಸುರೆನ್ಸ್ ಕಂಪನಿಗೆ ನಿರ್ದೇಶಿಸಿದೆ.