ಸಾರಾಂಶ
ಗುಳೇದಗುಡ್ಡ: ಕೇಂದ್ರ ಸರ್ಕಾರ ನೇಕಾರರಿಗೆ ಕಿಸಾನ ಸಮ್ಮಾನ ಯೋಜನೆ ಜಾರಿಗೊಳಿಸುವ ಮೂಲಕ ನೇಕಾರರಿಗೆ ಸಹಾಯ ಧನ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರಕಿ ಹೇಳಿದರು.
ಗುಳೇದಗುಡ್ಡ : ಕೇಂದ್ರ ಸರ್ಕಾರ ನೇಕಾರರಿಗೆ ಕಿಸಾನ ಸಮ್ಮಾನ ಯೋಜನೆ ಜಾರಿಗೊಳಿಸುವ ಮೂಲಕ ನೇಕಾರರಿಗೆ ಸಹಾಯ ಧನ ಒದಗಿಸಬೇಕು. ನೇಕಾರಿಕೆ ವೃತ್ತಿಯಲ್ಲಿ ಬದಲಾವಣೆ ತರಬೇಕು. ಹೊಸ ಹೊಸ ವಿನ್ಯಾಸ, ಕಲೆ ಅಳವಡಿಸಿಕೊಂಡಾಗ ನೇಕಾರಿಕೆ ಉದ್ಯೋಗ ಬೆಳವಣಿಗೆ ಕಾಣುತ್ತದೆ. ನೇಕಾರರಿಗೆ ಮಾರುಕಟ್ಟೆ ಮಳಿಗೆ ಮಾಡಬೇಕೆಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರಕಿ ಹೇಳಿದರು.
ಅವರು ಪಟ್ಟಣದ ಸಾಲೇಶ್ವರ ದೇವಸ್ಥಾನದಲ್ಲಿ ನೇಕಾರರ ಸಭೆಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಿ ಕಟ್ಟಡ ಕಾರ್ಮಿಕ ಮಾದರಿಯಲ್ಲಿ ನೇಕಾರರಿಗೂ ಸೌಲಭ್ಯಗಳನ್ನು ಒದಗಿಸಬೇಕು. ಆ ಮೂಲಕ ನೇಕಾರಿಕೆ, ನೇಕಾರ ಸಂಸ್ಕೃತಿ ಉಳಿಸಬೇಕು. ನೇಕಾರರಿಗೆ ಶೇ.ಶೂನ್ಯ ದರದಲ್ಲಿ ಸಾಲ ಸಿಗುತ್ತಿಲ್ಲ. ಅದರಲ್ಲಿ ಸಹಕಾರಿ ಸಂಘಗಳು ಅನ್ಯಾಯ ಮಾಡುತ್ತಿವೆ. ಕಟ್ಟಕಡೆಯ ನೇಕಾರರಿಗೂ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ರೈತ ಮತ್ತು ನೇಕಾರ ಒಂದೇ ನಾಣ್ಯದ ಎರಡು ಕಣ್ಣುಗಳೆಂದು ಪ್ರತಿಪಾದನೆ ಮಾಡಬೇಕು. ಸರ್ಕಾರ ನೇಕಾರರ ಬೆಳವಣಿಗೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಗುಳೇದಗುಡ್ಡದ ನೇಕಾರ ಸಹಕಾರಿ ಸಂಘಗಳಿಂದ ಬಡ ನೇಕಾರರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ನೇಕಾರ ಸಹಕಾರ ಸಂಘಗಳು ತಮ್ಮ ತಮ್ಮಲ್ಲಿಯೇ ಸೌಲಭ್ಯಗಳನ್ನು ಹಂಚಿಕೆ ಮಾಡುತ್ತಿವೆ. ಯಾವೊಬ್ಬ ಬಡವರಿಗೂ ನೇಕಾರ ಸಹಕಾರ ಸಂಘಗಳಿಂದ ಮತ್ತು ಜವಳಿ ಇಲಾಖೆಯಿಂದ ಯೋಜನೆಗಳು ಸಿಗುತ್ತಿಲ್ಲ. ಇದರಲ್ಲಿ ಜವಳಿ ಇಲಾಖೆ ಕೂಡಾ ಶಾಮಿಲಾಗಿದೆ. ಕೇವಲ ಶ್ರೀಮಂತರಿಗೆ ಮಾತ್ರ ಜವಳಿ ಇಲಾಖೆ ಸೌಲಭ್ಯಗಳು ದೊರೆಯುತ್ತಿವೆ ಎಂದು ನೊಂದ ನೇಕಾರ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಶಿವಾನಂದ ಎಣ್ಣಿ, ಶ್ರೀಕಾಂತ ಹುನಗುಂದ, ಮಂಜುನಾಥ ಹಣಗಿ, ಅಮರೇಶ ಮುಳಗುಂದ, ಶ್ರೀಕಾಂತ ಕಲ್ಯಾಣಿ, ಲೋಕೆಶ ಉಂಕಿ, ಶಶಿಧರ ಕೊಳ್ಳಿ, ಬೊಮ್ಮಣ್ಣ ರೋಜಿ, ಪ್ರಕಾಶ ಕಂಗಳ, ಕಮತಗಿಯ ಗುರುಪಾದಪ್ಪ ಕಡ್ಲಿಮಟ್ಟಿ, ಹುಚ್ಚೇಶ ಕಾಳಗಿ, ಸಿದ್ದಪ್ಪ ಚಿಂದಿ ಇದ್ದರು.