ಬೀದರ್ -ನಾಂದೇಡ್ ರೈಲು ಮಾರ್ಗ ಬೇಗ ಆರಂಬಿಸಿ: ಶಾಸಕ ಪ್ರಭು ಚವ್ಹಾಣ

| Published : Aug 03 2024, 12:30 AM IST

ಬೀದರ್ -ನಾಂದೇಡ್ ರೈಲು ಮಾರ್ಗ ಬೇಗ ಆರಂಬಿಸಿ: ಶಾಸಕ ಪ್ರಭು ಚವ್ಹಾಣ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್ ಶಾಸಕ ಪ್ರಭು ಚವ್ಹಾಣ ಅವರು ದೆಹಲಿಯಲ್ಲಿ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಔರಾದ್‌

ಬೀದರ್‌-ನಾಂದೇಡ್ ನೂತನ ರೈಲ್ವೆ ಮಾರ್ಗ ನಿರ್ಮಿಸುವ ಯೋಜನೆ ತ್ವರಿತಗತಿಯಲ್ಲಿ ಆರಂಭಿಸಬೇಕೆಂದು ಔರಾದ್‌(ಬಿ) ಶಾಸಕ ಪ್ರಭು ಬಿ.ಚವ್ಹಾಣ ಅವರು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣರಿಗೆ ಒತ್ತಾಯಿಸಿದರು.

ದೆಹಲಿಯಲ್ಲಿ ಶುಕ್ರವಾರ ಭೇಟಿ ಮಾಡಿದ ಶಾಸಕರು, ಬೀದರ್‌ ಜಿಲ್ಲೆಯಲ್ಲಿ ಹೊಸ ರೈಲ್ವೆ ಯೋಜನೆ ಆರಂಭಿಸುವುದು ಎಷ್ಟು ಅತ್ಯವಶ್ಯಕ ಎನ್ನುವುದರ ಬಗ್ಗೆ ಚರ್ಚಿಸಿದರು. ಗಡಿಯಲ್ಲಿರುವ ಔರಾದ(ಬಿ) ಮತಕ್ಷೇತ್ರದ ಜನತೆ ಮಹಾರಾಷ್ಟ್ರದೊಂದಿಗೆ ಹೆಚ್ಚಿನ ನಂಟನ್ನು ಹೊಂದಿದ್ದು, ಪರಸ್ಪರ ಆರ್ಥಿಕ ವಹಿವಾಟು ನಡೆಸುತ್ತಾರೆ. ಅಲ್ಲದೇ ನಾಂದೇಡ್‌ನ ಗುರುದ್ವಾರಕ್ಕೆ ಬರುವ ಸಿಖ್ ಸಮುದಾಯದ ಭಕ್ತರು ಬೀದರ ನಗರದಲ್ಲಿನ ಸಿಖ್ಖರ ಪವಿತ್ರ ಸ್ಥಳ ನಾನಕ್ ಝಿರಾಗೆ ಭೇಟಿ ಕೊಡುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುತ್ತಾರೆ.

ಹೊಸ ರೈಲ್ವೆ ಮಾರ್ಗದ ನಿರ್ಮಿಸಬೇಕೆಂಬುದು ಸುಮಾರು 20 ವರ್ಷಗಳ ಬೇಡಿಕೆಯಾಗಿದೆ. ಈ ಮಾರ್ಗ ನಿರ್ಮಿಸುವುದರಿಂದ ಈ ಭಾಗ ಆರ್ಥಿಕವಾಗಿಯೂ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ತೆಲಂಗಾಣ ರಾಜ್ಯದ ಗಡಿಯೂ ಹತ್ತಿರದಲ್ಲಿರುವುದರಿಂದ ಮೂರು ರಾಜ್ಯಗಳ ಜನತೆಗೂ ಅನುಕೂಲವಾಗಲಿದೆ. ಹಾಗಾಗಿ ಹೊಸ ರೈಲ್ವೆ ಮಾರ್ಗ ನಿರ್ಮಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ಯೋಜನೆ ಬೇಗ ಆರಂಭಿಸಬೇಕಿದೆ ಎಂದು ಒತ್ತಾಯಿಸಿದರು.

ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕ್ಯಾಬಿನೆಟ್ ಸಚಿವರು ಮತ್ತು ಪ್ರಧಾನಿಯವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಈ ಮನವಿಯನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೂ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.ಬಂದಾರಾ, ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ಅನುದಾನ ಕೊಡಿ:

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸರ್ಫೆಸ್ ಮೈನರ್ ಇರಿಗೇಷನ್ ಅಡಿಯಲ್ಲಿ ಬೀದರ ಜಿಲ್ಲೆಯಲ್ಲಿ ಕೆರೆ ನಿರ್ಮಾಣ, ಬಂದಾರಾ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸುವಂತೆ ಜಲಶಕ್ತಿ ಖಾತೆ ರಾಜ್ಯ ಸಚಿವರೂ ಆಗಿರುವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಈ ಭಾಗದಲ್ಲಿ ಯಾವುದೇ ಬೃಹತ್ ನೀರಾವರಿ ಯೋಜನೆಗಳಿಲ್ಲದ ಕಾರಣ ಪ್ರತಿ ವರ್ಷ ಬರಗಾಲ ಆವರಿಸುತ್ತದೆ. ವಿಶೇಷವಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ನೀರಿಗಾಗಿ ಪ್ರತಿವರ್ಷ ಸಾಕಷ್ಟು ಸಮಸ್ಯೆಯಾಗುತ್ತದೆ. ಅಂತರ್ಜಲ ಮಟ್ಟ ಸುಧಾರಿಸುವುದು, ಕೃಷಿ ಅಭಿವೃದ್ಧಿ ಮತ್ತು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ನಾಲಾಗಳಿಗೆ ಬ್ಯಾರೇಜ್/ಬಂದಾರಾ ಗಳನ್ನು ನಿರ್ಮಿಸುವುದು ಅತ್ಯಂತ ಅವಶ್ಯಕವಾಗಿದೆ.

ಔರಾದ(ಬಿ) ವಿಧಾನಸಭಾ ಕ್ಷೇತ್ರ ಒಳಗೊಂಡು ಬೀದರ ಜಿಲ್ಲೆಯಿಂದ ₹114.64 ಕೋಟಿ ವಿವಿಧ ಕಾಮಗಾರಿಗಳ ಪ್ರಸ್ತಾವನೆಯನ್ನು ತಮ್ಮ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯಡಿ ಶೇ.60ರಷ್ಟು ಕೇಂದ್ರ ಸರ್ಕಾರ ಅನುದಾನ ನೀಡಬೇಕಿರುತ್ತದೆ. ಕೂಡಲೆ ಬೀದರ ಜಿಲ್ಲೆಯ ಕಾಮಗಾರಿಗಳಿಗೆ ಪ್ರಾತಿನಿಧ್ಯ ನೀಡಿ, ಈ ಎಲ್ಲಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.