ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯದಲ್ಲಿ ಭತ್ತದ ಕೊಯ್ಲು ಆರಂಭವಾಗುವ ಮುನ್ನವೇ ಭತ್ತ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ನಿಲ್ಲುವಂತೆ ತಾಲೂಕು ರೈತಸಂಘದ ಮುಖಂಡರು ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಅಣೆಕಟ್ಟೆಗಳು ಹಾಗೂ ಕೆರೆ ಕಟ್ಟೆಗಳು ವರುಣನ ಕೃಪೆಯಿಂದ ತುಂಬಿ ತುಳುಕುತ್ತಿವೆ ಎಂದರು.
ಮುಂದಿನ 24 ತಿಂಗಳುಗಳ ಕಾಲ ನಾಡಿನ ಜನ ನೆಮ್ಮದಿಯಿಂದ ಊಟ ಮಾಡಬಹುದಾಷ್ಟು ಪ್ರಮಾಣದ ಭತ್ತ ರೈತರ ಹೊಲಗದ್ದೆಗಳಲ್ಲಿ ಬೆಳೆಯುತ್ತಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಭತ್ತದ ಕಟಾವು ಆರಂಭವಾಗಲಿದೆ. ದಳ್ಳಾಳಿಗಳು ರೈತರ ಗದ್ದೆಗಳಿಗೆ ದಾಳಿ ಮಾಡುವ ಮುನ್ನವೇ ರಾಜ್ಯ ಸರ್ಕಾರ ಭತ್ತ ಖರೀದಿ ಕೆಂದ್ರ ಆರಂಭಿಸಿ ರೈತ ಹಿತ ಕಾಯಬೇಕು ಎಂದು ಒತ್ತಾಯಿಸಿದರು.ಭತ್ತ ಕಟಾವು ಮಾಡಿದ ನಂತರ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ಅದರ ಲಾಭ ದಳ್ಳಾಳಿಗಳಿಗೆ ಆಗುತ್ತದೆಯೇ ವಿನಹಃ ರೈತರಿಗೆ ಪ್ರಯೋಜನಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಭತ್ತ ಕಟಾವಿಗೆ ಮುನ್ನವೇ ಖರೀದಿ ಕೆಂದ್ರಗಳನ್ನು ಆರಂಭಿಸಬೇಕು ಎಂದು ಕೋರಿದರು.
ಹೊಲಗದ್ದೆಗಳ ಬಳಿಯೇ ಎಫ್.ಐ.ಡಿ ಮಾಡಿ:ತಾಲೂಕು ವ್ಯಾಪ್ತಿಯಲ್ಲಿ ರೈತರು ನಿರೀಕ್ಷೆಗೂ ಮೀರಿ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಬಹುತೇಕ ರೈತರ ಹೆಸರಿನಲ್ಲಿ ಆರ್.ಟಿ.ಸಿ ಇಲ್ಲ. ಪೌತಿ ಖಾತೆ ಮತ್ತಿತರ ಸಮಸ್ಯೆಗಳಿಂದ ಆರ್.ಟಿ.ಸಿ ಕುಟುಂಬದ ಹಿರಿಯರ ಹೆಸರಿನಲ್ಲಿ ಹಾಗೂ ಸತ್ತವರ ಹೆಸರಿನಲ್ಲಿಯೇ ಇದೆ. ಕೆಲವು ಕಡೆ ಅಣ್ಣ ತಮ್ಮಂದಿರು ಬೇರೆಯಾಗಿದ್ದರು ಆರ್.ಟಿ.ಸಿ ನಾನಾ ಕಾರಣಗಳಿಂದ ರೈತರ ಹೆಸರಿಗೆ ಬಂದಿಲ್ಲ ಎಂದರು.
ಭತ್ತ ಖರೀದಿಗೆ ರೈತರ ಹೆಸರಿನಲ್ಲಿ ಪಹಣಿ ಇರಬೇಕಾಗಿದೆ. ಆದ ಕಾರಣ ಕೃಷಿ ಇಲಾಖೆಯ ಅಧಿಕಾರಿಗಳು ಭತ್ತ ಬೆಳೆದಿರುವ ರೈತರ ಜಮೀನುಗಳ ಬಳಿಗೆ ಹೋಗಿ ಜಮೀನಿನ ಮುಂದೆ ರೈತರ ಫೋಟೋ ತೆಗೆದು ಎಫ್ ಐಡಿ ಮಾಡಿ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ರೈತರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.ಡಿಸಂಬರ್‌ನಲ್ಲಿ ಮಂಡ್ಯ ನಗರದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಮ್ಮೇಳನ ವಿವಿಧ ಸಮಿತಿಗಳಲ್ಲಿ ಜಿಲ್ಲೆಯ ರೈತ ಮುಖಂಡರಿಗೆ ಅವಕಾಶ ಕಲ್ಪಿಸದೆ ವಂಚಿಸಿದ್ದಾರೆ ಎಂದು ದೂರಿದರು.
ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಸರ್ವಾಧಿಕಾರಿ ಮನೋಭಾವನೆ ತ್ಯಜಿಸಿ ರೈತ ಮುಖಂಡರೊಂದಿಗೂ ಸಂವಹನ ಇಟ್ಟುಕೊಳ್ಳಬೇಕು. ರೈತರು ಕನ್ನಡ ಸಂಸ್ಕೃತಿಯ ಒಂದು ಭಾಗ. ಸಾಹಿತ್ಯ ಸಮ್ಮೇಳನದ ಕಾರ್ಯ ಚಟುವಟಿಕೆಗಳಲ್ಲಿ ರೈತ ಮುಖಂಡರಿಗೂ ಜವಾಬ್ದಾರಿ ನೀಡಬೇಕು. ಸಮ್ಮೇಳನದ ಸಾಹಿತಿಕ ವಿಚಾರ ಗೋಷ್ಠಿಗಳಲ್ಲಿ ಅನ್ನದಾತರ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಮಾಡುವಂತೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕೃಷ್ಣಾಪುರ ರಾಜಣ್ಣ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕಾಗೇಪುರ ಮಹೇಶ್ ಇದ್ದರು.