ಗೋಮಾಳ ಕಾಮಗಾರಿ ತುರ್ತಾಗಿ ಆರಂಭಿಸಿ: ಜಿಪಂ ಸಿಇಒ

| Published : Apr 15 2024, 01:15 AM IST

ಸಾರಾಂಶ

ತಾಲೂಕಿನ ಬೇವೂರು ಗ್ರಾಮದಲ್ಲಿರುವ ಗೋಮಾಳ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಿ ಕಂದಕಗಳನ್ನು ನಿರ್ಮಿಸಬೇಕು.

ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಂಡೆ ಸೂಚನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಬೇವೂರು ಗ್ರಾಮದಲ್ಲಿರುವ ಗೋಮಾಳ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಿ ಕಂದಕಗಳನ್ನು ನಿರ್ಮಿಸಬೇಕು ಎಂದು ಕೊಪ್ಪಳ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಸೂಚಿಸಿದರು. ತಾಲೂಕಿನ ಬೇವೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲ ಆರಂಭದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಶಾಲಾಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರತಿ ವಾರ ಕುಡಿಯುವ ನೀರಿನ ಟಾಸ್ಕ್‌ಪೋರ್ಸ್ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗಮನಹರಿಸಬೇಕು ಎಂದರು.

ಬೇವೂರು ಗ್ರಾಮದ ಒಟ್ಟು ಜನಸಂಖ್ಯೆ, ಮತದಾರರು, ಜೆಜೆಎಂ ಕಾಮಗಾರಿ ನರೇಗಾ ಯೋಜನೆ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಹಾಗೂ ಪಡಿತರ ಚೀಟಿಗಳ ಮಾಹಿತಿ, ಅಂಗನವಾಡಿಗಳ ಕುಡಿಯುವ ನೀರು,ಶೌಚಾಲಯ, ಆಹಾರ ವಿತರಣೆ, ಶಾಲೆಗಳಲ್ಲಿ ಶೌಚಾಲಯ, ಅಡುಗೆ ಕೋಣೆ, ತಡೆಗೋಡೆ ಸೇರಿದಂತೆ ಮೂಲಭೂತ ಸೌಕರ್ಯಗಳ ಮಾಹಿತಿ, ಅರಣ್ಯ ಇಲಾಖೆ ಕಾಮಗಾರಿಗಳ ಮಾಹಿತಿ ಪಡೆದರು.

ಬೇವೂರು ಹಾಗೂ ಹಿರೇಅರಳಹಳ್ಳಿಯ ಬದು ನಿರ್ವಹಣೆ ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಲು ಪಿಆರ್‌ಇಡಿ ಹಾಗೂ ಆರ್‌ಡಬ್ಲೂಎಸ್ ಇಲಾಖೆಯವರಿಗೆ ಖಡಕ್ ಆಗಿ ಸೂಚಿಸಿದರು.

ಬಳಿಕ ನರೇಗಾ ಯೋಜನೆಯಡಿ ಕೈಗೊಂಡ ಶಾಲಾಭಿವೃದ್ಧಿ ಕಾಮಗಾರಿಗಳು ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಸಭೆಯಲ್ಲಿ ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ, ತೋಟಗಾರಿಕೆ ನಿರ್ದೇಶಕ ನಿಂಗನಗೌಡ ಪಾಟೀಲ, ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಆರ್‌ಎಫ್‌ಒ ಬಸವರಾಜ ಗೋಗೇರಿ, ಸಿಪಿಡಿಒ ಬೆಡದಪ್ಪ ಮಾಳೇಕೊಪ್ಪ, ಆರ್‌ಡಬ್ಲೂಎಸ್ ಎಇಇ ರಿಜ್ವಾನಬೇಗಂ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಪಿಡಿಒ ಅಬ್ದುಲ್ ಗಫಾರ, ಕರವಸೂಲಿಗಾರ ಬಸವರಾಜ, ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ತಾಂತ್ರಿಕ ಸಹಾಯಕರು, ತಾಪಂ, ಗ್ರಾಪಂ ಸಿಬ್ಬಂದಿ ಇದ್ದರು. ೧೩ವೈಎಲ್‌ಬಿ೩:

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.