ಶಿರಹಟ್ಟಿಯಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಆರಂಭಿಸಲು ಮನವಿ

| Published : Jan 07 2025, 12:31 AM IST

ಸಾರಾಂಶ

ಶಿರಹಟ್ಟಿ ತಾಲೂಕು ಕೇಂದ್ರ ಸ್ಥಳವಾದ ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಪ್ರಾರಂಭಿಸಬೇಕು ಎಂದು ಸ್ಥಳೀಯ ಕುಂದು-ಕೊರತೆ ನಿವಾರಣಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ಹೆಸ್ಕಾಂ ಕಾರ್ಯಾಲಯದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಶಿರಹಟ್ಟಿ: ತಾಲೂಕು ಕೇಂದ್ರ ಸ್ಥಳವಾದ ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಪ್ರಾರಂಭಿಸಬೇಕು ಎಂದು ಸ್ಥಳೀಯ ಕುಂದು-ಕೊರತೆ ನಿವಾರಣಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ಹೆಸ್ಕಾಂ ಕಾರ್ಯಾಲಯದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಸ್ಥಳೀಯ ಕುಂದು-ಕೊರತೆ ನಿವಾರಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಅಕ್ಬರಸಾಬ್‌ ಯಾದಗಿರಿ ಮನವಿ ಸಲ್ಲಿಸಿ ಮಾತನಾಡಿ, ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಶಿರಹಟ್ಟಿ ಅಭಿವೃದ್ಧಿ ವಿಷಯದಲ್ಲಿ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ತಾಲೂಕು ಕೇಂದ್ರವಾದರೂ ಇಲ್ಲಿಯವರೆಗೆ ಹೆಸ್ಕಾಂ ಉಪವಿಭಾಗ ಕೇಂದ್ರವಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲು ಮತಕ್ಷೇತ್ರವಾದ ಶಿರಹಟ್ಟಿ ತಾಲೂಕಿನಲ್ಲಿ ಸರ್ಕಾರ ನೂತನ ಹೆಸ್ಕಾಂ ಉಪ ವಿಭಾಗ ಕಚೇರಿ ಶೀಘ್ರದಲ್ಲಿಯೇ ಪ್ರಾರಂಭಿಸಿ, ಈ ಭಾಗದ ರೈತರ ನೀರಾವರಿ ಜಮೀನುಗಳಿಗೆ ಅನುಕೂಲ ಮಾಡಿಕೊಡಬೇಕು. ನಮ್ಮ ತಾಲೂಕಿನ ಕಡೆಯ ಹಳ್ಳಿಗಳಲ್ಲಿ ನೀರಾವರಿ ಹೊಂದಿದ ಸಾವಿರಾರು ಸಂಖ್ಯೆ ರೈತರಿದ್ದಾರೆ. ಸಮರ್ಪಕ ವಿದ್ಯುತ್ ಇಲ್ಲದೇ ನೀರಾವರಿ ಬೆಳೆಗಳು ಬರುತ್ತಿಲ್ಲ. ಕೂಡಲೇ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಹೆಸ್ಕಾಂ ವಿಭಾಗದ ಪ್ರತಿ ಕೆಲಸಕ್ಕೂ ಲಕ್ಷ್ಮೇಶ್ವರ ಅಥವಾ ಗದಗ ನಗರಕ್ಕೆ ಹೋಗಬೇಕು. ಇಡಿ ದಿನ ಹೊಲದ ಕೆಲಸ ಕಾರ್ಯಗಳನ್ನು ಬಿಟ್ಟು ಹೋಗುವ ಅನಿವಾರ್ಯತೆ ಇದೆ. ತಾಲೂಕಿನ ಗಡಿ ಪ್ರದೇಶಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ಚಿಕ್ಕಪುಟ್ಟ ಕಾರ್ಯಗಳು ಸಹ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ನ್ಯಾಯಯುತ ಬೇಡಿಕೆಯನ್ನು ಇಲಾಖೆಯ ಮೇಲಧಿಕಾರಿಗಳು ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ ಕುಂದು-ಕೊರತೆ ಹೋರಾಟ ಸಮಿತಿ ಅಡಿಯಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ಶ್ರೀನಿವಾಸ ಬಾರ್ಬರ, ಮುನ್ನಾ ಢಾಲಾಯತ, ಜಾಕಿರ ಕೋಳಿವಾಡ, ಚನ್ನವೀರಪ್ಪ ಕಲ್ಯಾಣಿ, ಎಂ.ಐ. ಕೆರೆಮನಿ, ಇಮ್ತಿಯಾಜ್‌ ಶಿಗ್ಲಿ, ಅಪ್ಪಣ್ಣ ಕುಬೇರ, ಮಲ್ಲಿಕಾರ್ಜುನ ಸೂರಣಗಿ, ಸೋಮಣ್ಣ ಜೋಗಿ, ಅಬ್ದುಲ್‌ ಗಫಾರ ಕುದರಿ, ಮಲ್ಲಿಕಾರ್ಜುನ ಸೂರಣಗಿ, ಚಾಂದಸಾಬ ಕವಲೂರ, ಮೈನುಸಾಬ ಬುವಾಜಿ ಉಪಸ್ಥಿತರಿದ್ದರು.