ಜಿಲ್ಲೆಯಲ್ಲಿ 163 ಕೂಸಿನ ಮನೆಗಳ ಆರಂಭ

| Published : Apr 21 2024, 02:16 AM IST

ಸಾರಾಂಶ

ವಿಜಯಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ ಮಾಹಿತಿ ನೀಡಿದರು.

ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ವಿಶೇಷ ಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ನರೇಗಾ ಯೋಜನೆಯ ಕೆಲಸದಲ್ಲಿ ಶೇ.50 ರಷ್ಟು ರಿಯಾಯತಿ ನೀಡಲಾಗಿದೆ. ಆದ್ದರಿಂದ ಎಲ್ಲರೂ ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಬೆನಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಿಇಒ ರಿಶಿ ಆನಂದ, ಅಲ್ಲಿನ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಪುಸ್ತಕಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದರು. ಗ್ರಂಥಾಲಯದ ಮುಂಭಾಗದಲ್ಲಿ ಖಾಲಿ ಜಾಗಯಲ್ಲಿ ವಿವಿಧ ರೀತಿಯ ಸಸಿಗಳನ್ನು ಬೆಳೆಸಿ ಉದ್ಯಾನವನ ನಿರ್ಮಿಸಿ ಪರಿಸರ ಸ್ನೇಹಿ ಗ್ರಂಥಾಲಯ ಮಾಡುವಂತೆ ಸೂಚಿಸಿದರು.

ಈ ವೇಳೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಸಿನ ಮನೆ ಎಂಬ ಶೀರ್ಷಿಕೆಯಡಿ ಪ್ರಾರಂಭವಾಗಿರುವ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಕೂಸಿನ ಮನೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಇದೇ ವೇಳೆ ಮಕ್ಕಳ ಹಾಜರಾತಿ, ಮಕ್ಕಳಿಗೆ ನೀಡುತ್ತಿರುವ ಆಹಾರ, ಆಟಿಕೆ ಸಾಮಾನುಗಳು, ಕೂಸಿನ ಮನೆ ಕಡತಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ವ್ಯವಸ್ಥಿತವಾಗಿ ಪೌಷ್ಟಿಕ ಆಹಾರ ಒದಗಿಸಬೇಕು. ಆಟದ ಸಮುಯದಲ್ಲಿ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ವಿತರಿಸಬೇಕು, ಕೂಸಿನ ಮನೆಯ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳು, ವರ್ಣಮಾಲೆಗಳು ಹಾಗೂ ಮೂಲಾಕ್ಷರಗಳನ್ನು ಬಿಡಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.

ಬಳಿಕ ಗ್ರಂಥಾಲಯದ ಮುಂಭಾಗದಲ್ಲಿನ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾದ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ನೀಲಗಂಗಾ ಬಬಲಾದ, ಸಹಾಯಕ ನಿರ್ದೇಶಕ(ಗ್ರಾ.ಉ) ಸಂಜಯ ಖಡಗೇಕರ, ರೂಗಿ ಗ್ರಾಪಂ ಪಿಡಿಒ ಬಸವರಾಜ ಬಬಲಾದ, ಬೆನಕನಹಳ್ಳಿ ಗ್ರಾಪಂ ಪಿಡಿಒ ಪ್ರಕಾಶ ರಾಠೋಡ, ಕೂಸಿನ ಮನೆಯ ಮಕ್ಕಳ ಆರೈಕೆದಾರರು ಹಾಗೂ ಇತರರು ಉಪಸ್ಥಿತರಿದ್ದರು.--

ಮಕ್ಕಳ ನೋಡಿಕೊಳ್ಳಲು ಆರೈಕೆದಾರರ ನೇಮಕ

ಕೂಸಿನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಪ್ರತ್ಯೇಕವಾಗಿ ಮಕ್ಕಳ ಆರೈಕೆದಾರರನ್ನು ನೇಮಕ ಮಾಡಲಾಗಿದೆ. ಅಲ್ಲಿ ಮಕ್ಕಳ ಆರೈಕೆದಾರರು ಮಕ್ಕಳಿಗೆ ಆಟ-ಪಾಠ, ಪಾಲನೆ-ಪೋಷಣೆ, ವೈಯಕ್ತಿಕ ಸ್ವಚ್ಛತೆ ಕಡೆಗೆ ವಿಶೇಷ ಗಮನ ನೀಡುತ್ತಾರೆ. ಕಾರ್ಮಿಕರು ನಿರ್ಭೀತಿಯಿಂದ ನಿಮ್ಮ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು. ನರೇಗಾದಡಿ ಹೆಚ್ಚು ಕೆಲಸ ನಿರ್ವಹಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಿ, ಪ್ರತಿದಿನ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ₹ 349 ಇದೆ. ಎಲ್ಲರೂ ಈ ಸೌಲಭ್ಯವನ್ನು ಪಡೆದು ಅಭಿವೃದ್ಧಿಯತ್ತ ಸಾಗಬೇಕು ಎಂದು ಜಿಪಂ ಸಿಇಒ ರಿಶಿ ಆನಂದ ತಿಳಿಸಿದರು.

---

ಕೋಟ್‌

ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದ್ದು, ಕೂಲಿ ಕಾರ್ಮಿಕರು ತಮ್ಮ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆಗೆ ಕೂಸಿನ ಮನೆಯಲ್ಲಿ ಬಿಟ್ಟು ನರೇಗಾ ಕೆಲಸ ಮಾಡಬಹುದು.

-ರಿಶಿ ಆನಂದ ಜಿಪಂ ಸಿಇಒ