ಸಾರಾಂಶ
ಜ್ಯೋತಿ ಬೆಳಕು ಜ್ಞಾನದ ಸಂಕೇತ. ಬೇರೊಬ್ಬರ ಬದುಕಿಗೆ ಹೊಸ ಬೆಳಕು ನೀಡುವ ಹಣತೆ ಆಗಬೇಕು.
ಹೂವಿನಹಡಗಲಿ: ಜ್ಯೋತಿ ಬೆಳಕು ಜ್ಞಾನದ ಸಂಕೇತ. ಬೇರೊಬ್ಬರ ಬದುಕಿಗೆ ಹೊಸ ಬೆಳಕು ನೀಡುವ ಹಣತೆ ಆಗಬೇಕೆಂದು ನಿವೃತ್ತ ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಬೆಟ್ಟಯ್ಯ ಹೇಳಿದರು.
ಪಟ್ಟಣದ ಪಾರ್ಶ್ವನಾಥ ಜಿನ ಮಂದಿರದಲ್ಲಿ ಜೈನ ಸಮುದಾಯ, ಜ್ವಾಲಾಮಾಲಿನಿ ಮಹಿಳಾ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಸರಾ ಮೊದಲ ದಿನ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಾಡಿನಾದ್ಯಂತ ಸಡಗರ ಸಂಭ್ರಮದಿಂದ ದಸರಾ ಉತ್ಸವ ಆರಂಭವಾಗಿದೆ. ತಾಯಿ ಚಾಮುಂಡೇಶ್ವರಿ ಸಕಲರಿಗೂ ಒಳಿತು ಮಾಡಲಿ ಎಂದರು.ವೈಯಕ್ತಿಕ ಬದುಕಿನ ಜೊತೆಗೆ ಸಮಾಜಮುಖಿ ಕಾರ್ಯಕ್ರಮ ನಡೆಸಬೇಕು. ಹಬ್ಬಗಳು ಸೌಹಾರ್ದ, ಸಾಮರಸ್ಯ ಸಾರುವ ಪರಂಪರೆ ಹೊಂದಿವೆ. ಮಕ್ಕಳು ಯುವಕರು ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಎಚ್.ಎಸ್.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ಮಂಜುನಾಥ ಜೈನ್, ಸಮಾಜದ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಜ್ವಾಲಾಮಾಲಿನಿ ಮಹಿಳಾ ಸಂಪದ ಅಧ್ಯಕ್ಷೆ ಎಂ.ಡಿ. ಪದ್ಮಾವತಿ, ಉಪಾಧ್ಯಕ್ಷೆ ಜಯಶ್ರೀ ಮಂಜುನಾಥ ಜೈನ್, ರೇವಡಿ ಪಾರ್ಶ್ವನಾಥ, ಎಚ್.ಡಿ.ಅಜಿತ್ ಇತರರು ಉಪಸ್ಥಿತರಿದ್ದರು.ರೋಜಾ ರತ್ನಾಕರ, ಚಂಪಾ ರಾಯಪ್ಪ, ರತ್ನಾಕರ ಜೈನ್ ನಿರ್ವಹಿಸಿದರು.
ದಸರಾ ಹಬ್ಬದ ನಿಮಿತ್ತ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.