ಸಾರಾಂಶ
ಈ ಹಿಂದೆ ಗ್ರಾಮಸ್ಥರು ₹7 ಲಕ್ಷ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದರು.
ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರವು ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಿದ್ದರಿಂದ ಖುಷಿಗೊಂಡ ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮಸ್ಥರು ಶಾಲಾ ಮುಖ್ಯ ಶಿಕ್ಷಕರಿಗೆ ₹50 ಸಾವಿರ ದೇಣಿಗೆ ನೀಡಿ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ.
ಗ್ರಾಮದ ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿ, ಈ ಹಿಂದೆ ಗ್ರಾಮಸ್ಥರು ₹7 ಲಕ್ಷ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದರು. ಶಾಲೆಗೆ ವಿದ್ಯುತ್ ಸೌಲಭ್ಯಕ್ಕಾಗಿ ₹25 ಸಾವಿರ, ಗ್ರಾಮದ ಪ್ರೌಢಶಾಲಾ ಅಭಿವೃದ್ಧಿಗೆ ₹೧೨ಸಾವಿರ ನೀಡಿದ್ದರು. ಈ ಬಾರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಿದ್ದರಿಂದ ₹50 ಸಾವಿರ ದೇಣಿಗೆ ನೀಡಿದ್ದೇವೆ. ಈ ಹಣದಲ್ಲಿ ಶಾಲೆಗೆ ಪೀಠೋಪಕರಣ, ಕಲಿಕಾ ಸಾಮಗ್ರಿ, ಕೊಠಡಿ ನವೀಕರಣಕ್ಕೆ ಬಳಸಿಕೊಳ್ಳುವಂತೆ ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.ಸಿಐಟಿಯುನ ಆರ್.ಎಸ್.ಬಸವರಾಜ ಮಾತನಾಡಿ, ಸರ್ಕಾರ ಎಲ್‌ಕೆಜಿ-ಯುಕೆಜಿ ಶಿಕ್ಷಣ ನೀಡುವುದರಿಂದ ಬಡ ಮಕ್ಕಳು ಕೂಡ ಶೈಕ್ಷಣಿಕ ಪ್ರಗತಿ ಸಾಧಿಸಲು ಪೂರಕವಾಗಿದೆ. ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿದ್ದರು. ಈ ಮೊದಲು ಗ್ರಾಮೀಣ ಪ್ರದೇಶದ ಮಕ್ಕಳು ಎಲ್‌ಕೆಜಿ-ಯುಕೆಜಿ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸರ್ಕಾರ ಎಲ್‌ಕೆಜಿ-ಯುಕೆಜಿ ಆರಂಭಿಸಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮಹದೇವಪ್ಪ, ಮಾರುತೆಪ್ಪ, ಸೊನ್ನದ ದುರುಗಪ್ಪ, ನಾಗಭೂಷಣ, ಗ್ರಾಪಂ ಸದಸ್ಯರಾದ ವೆಂಕಟೇಶ, ರಾಮ, ಹನುಮಕ್ಕ ಅಂಜಿನಪ್ಪ, ಹೆಗ್ಡಾಳ್ ಪರುಶುರಾಮ, ಸೋಮು ಜಂಗ್ಲಿ, ಮುಖ್ಯಗುರುಗಳಾದ ದೇವಪ್ಪ, ಈರಣ್ಣ, ಶಿಕ್ಷಕರಾದ ಚನ್ನಬಸಪ್ಪ, ವಾಮದೇವ, ಶೋಭಾ, ದುರುಗಮ್ಮ, ಪದ್ಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ಬೆಳಗುಂದಿ ಫಕ್ಕೀರಪ್ಪ, ಉಪಾಧ್ಯಕ್ಷ ಬೋವಿ ಅಂಜಿನಪ್ಪ, ಸದಸ್ಯರು ಇದ್ದರು.