ಸಾರಾಂಶ
ಬಾಹುಬಲಿ ಆಸ್ಪತ್ರೆಯು ಈ ಭಾಗದ ಜನರಿಗೆ ಆಶಾಕಿರಣವಾಗಿದ್ದು, ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್ ಹೇಳಿದರು. ಶ್ರವಣಬೆಳಗೊಳದಲ್ಲಿ ಶ್ರೀ ಬಾಹುಬಲಿ ಆಸ್ಪತ್ರೆಯಲ್ಲಿ ಶುಕ್ರವಾರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ ಮಹಿಳಾ ಒಕ್ಕೂಟದ ಪದ್ಮಿನಿ ಪದ್ಮರಾಜ್ ಉದ್ಘಾಟನೆ
ಶ್ರವಣಬೆಳಗೊಳ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೂರದೃಷ್ಟಿಯಿಂದ 2006 ರಲ್ಲಿ ಮಕ್ಕಳ ಆರೋಗ್ಯ ಸೇವೆಗಾಗಿ ಆರಂಭಗೊಂಡ ಬಾಹುಬಲಿ ಆಸ್ಪತ್ರೆಯು ಈ ಭಾಗದ ಜನರಿಗೆ ಆಶಾಕಿರಣವಾಗಿದ್ದು, ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್ ಹೇಳಿದರು.ಇಲ್ಲಿನ ಶ್ರೀ ಧವಲತೀರ್ಥಂನಲ್ಲಿರುವ ಶ್ರೀ ಬಾಹುಬಲಿ ಆಸ್ಪತ್ರೆಯಲ್ಲಿ ಶುಕ್ರವಾರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಡಿಮೆ ಅವಧಿಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವಾ ಕಾರ್ಯಗಳನ್ನು ಆರಂಭಿಸುತ್ತಿದ್ದು, ಅವರ ಸಾಮಾಜಿಕ ಕೈಂಕರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್ ಮಾತನಾಡಿ, ಶ್ರವಣಬೆಳಗೊಳದಲ್ಲಿ ಎಲ್‌ಕೆಜಿಯಿಂದ ನರ್ಸಿಂಗ್, ಡಿಪ್ಲೊಮಾ ಸೇರಿದಂತೆ ಎಂಜಿನಿಯರಿಂಗ್ ಪದವಿವರೆಗೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಡೊನೇಷನ್ ಇಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿರುವುದು ಶ್ಲಾಘನೀಯ. ಹಿರಿಯ ಶ್ರೀಗಳ ಹಲವಾರು ವರ್ಷಗಳ ಕನಸನ್ನು ಅಭಿನವ ಶ್ರೀಗಳು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಡಯಾಲಿಸಿಸ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಘಟಕಗಳನ್ನು ಪ್ರಾರಂಭಿಸಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವುದು ಈ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದರು.ಆಶಾ ಕಾರ್ಯಕರ್ತರಿಗೆ ಶ್ರೀಮಠದ ವತಿಯಿಂದ ಕೊಡೆಗಳನ್ನು ವಿತರಣೆ ಮಾಡಲಾಯಿತು.
ಮಕ್ಕಳ ತಜ್ಞ ಡಾ. ವಿಜಯಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ಸದಸ್ಯರಾದ ಯಶಸ್ ಜೈನ್, ಶಾಲಿನಿ ದೇವೇಂದ್ರಕುಮಾರ್, ಶ್ರೀ ಬಾಹುಬಲಿ ಆಸ್ಪತ್ರೆ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ರತ್ನರಾಜು, ತುಮಕೂರಿನ ಉದ್ಯಮಿ ಆರ್.ಎ. ಸುರೇಶ್ ಕುಮಾರ್, ಕೂಷ್ಮಾಂ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ, ಶೃತಕೇವಲಿ ಈಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಪುಟ್ಟರಾಜು, ಎಸ್‌ಎಸ್‌ಡಿಜೆಜೆಪಿ ಸಂಘದ ಕಾರ್ಯದರ್ಶಿ ಬಬನ್ ಪಾರಿಸ ದತವಾಡೆ, ಡಾ.ರಾಮಚಂದ್ರ, ಡಾ.ಪೂರ್ಣಿಮಾ ಇದ್ದರು.