ಸ್ವಯಂ ಉದ್ಯೋಗ ಆರಂಭಿಸಿ ಅಭಿವೃದ್ಧಿ ಹೊಂದಿ: ಗೀತಾ

| Published : Oct 11 2024, 11:46 PM IST

ಸಾರಾಂಶ

ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು.

ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ । ತಾಪಂ ಸಹಾಯಕ ನಿರ್ದೇಶಕಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕೊಪ್ಪಳ ಸಹಯೋಗದಲ್ಲಿ ಉದ್ಯೋಗ ಆವಿಷ್ಕಾರ ಯೋಜನೆಯಡಿಯಲ್ಲಿ 30 ದಿನಗಳ ಕಾಲ ಮಹಿಳೆಯರಿಗಾಗಿ ನಡೆದ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.

ಈ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ, ಕಳೆದ ಮೂವತ್ತು ದಿನಗಳಲ್ಲಿ ಉದ್ಯಮಶೀಲತೆಯ ಕುರಿತು ತರಬೇತಿ ಪಡೆದಿದ್ದೀರಿ. ನೀವು ಪಡೆದ ತರಬೇತಿಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು. ಈಗಿನ ಮಹಿಳೆಯರಿಗೆ ಏನು ಬೇಕು ಬೇಡ ಎಂಬುದನ್ನು ಅರಿತು ಅತ್ತ್ಯುತ್ತಮ ಪ್ರಾಡಕ್ಟ್‌ಗಳನ್ನು ತಂದು ಪಾರ್ಲರ್ ಆರಂಭಿಸಬೇಕು. ತರಬೇತಿ ಕಲಿತು ಹಾಗೆ ಬಿಡಬಾರದು. ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು ಎಂದರು.

ಎನ್ಆರ್‌ಎಲ್ಎಂ ಮೇಲ್ವಿಚಾರಕ ಸಂಗಣ್ಣ ಮಾತನಾಡಿ, ಇಂದಿನ ಆಧುನಿಕತೆಯ ಯುಗದಲ್ಲಿ ಮಾಡೆಲಿಂಗ್ ಕ್ಷೇತ್ರ ಬೃಹದಾಕಾರದಲ್ಲಿ ಬೆಳೆದಿದೆ. ಸಿನೆಮಾ ರಂಗದಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಇಂದು ಅಲಂಕಾರ ಮಾಡುವವರಿಗೆ ಅನೇಕ ಅವಕಾಶಗಳು ಇದೆ. ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ಸಹ ಮಹಿಳೆಯರ ಅಲಂಕಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇಂದು ತರಬೇತಿ ಪಡೆದ ಫಲಾನುಭವಿಗಳು ತಮ್ಮ ವಿದ್ಯೆಯನ್ನು ನಿರ್ಲಕ್ಷ ಮಾಡದೇ ಹೊಸ ಹೊಸ ವಿಧಾನಗಳನ್ನು ತಾಂತ್ರಿಕತೆಯ ಸಲಕರಣೆಗಳ ಉಪಯೋಗ ಮಾಡುವುದು ಸೇರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಲಿತು ಮುಂದೆ ಬರಬೇಕು. ಸ್ವ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ನಲ್ಮ ಹಾಗೂ ಗ್ರಾಮೀಣ ಮಟ್ಟದಲ್ಲಿ ಅನೇಕ ಸಾಲ ಸೌಲಭ್ಯಗಳು ಇದ್ದು, ಅವುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ಇದೇ ವೇಳೆ ತರಬೇತಿ ಪಡೆದ 30 ಜನ ಮಹಿಳೆಯರಿಗೆ ಸಿಡಾಕ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಸಿಡಾಕ್ ಸಂಸ್ಥೆಯ ಸಿಬ್ಬಂದಿ ಅಕ್ಷತಾ ಗೋಟೂರ, ಶೋಭಾ ಪಾಟೀಲ್, ಸುಧಾ ಮುತ್ತಗಿ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಫಲಾನುಭವಿಗಳು ಇದ್ದರು.