ಸಪ್ತ ಮಾತೃಕೆಯರು ಶಕ್ತಿದೇವತೆಗಳ ಎಂಬ ನಂಬಿಕೆಯಿಂದ ಅನಾಧಿ ಕಾಲದಿಂದಲೂ ದೊಡ್ಡಹಬ್ಬವನ್ನು ಕಲ್ಕುಣಿ, ದೊಡ್ಡಗೌಡನ ಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ಪುಟ್ಟೇಗೌಡನಕೊಪ್ಪಲು, ಚಿಕ್ಕಕಲ್ಕುಣ ಸೇರಿದಂತೆ ಹಲವು ಗ್ರಾಮಗಳ ಜನರು ಆಚರಣೆ ಮಾಡಿಕೊಂಡು ಬಂದಿದ್ದು, ಪ್ರತಿ ಐದು ವರ್ಷಗಳೊಮ್ಮೆ ನಡೆಯುತ್ತಿದ್ದ ಹಬ್ಬವು ಕೋವಿಂಡ್ ನಿಂದ 11 ವರ್ಷಗಳ ನಂತರ ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ 11 ವರ್ಷಗಳ ನಂತರ ಜ.15ರಿಂದ 23ರವರೆಗೆ ನಡೆಯುವ ಸಪ್ತಮಾತೃಕೆಯರ ದೊಡ್ಡಹಬ್ಬಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡು ಗುರುವಾರ ಚಾಲನೆ ದೊರೆಯಲಿದೆ.ಮಹಾಶಕ್ತಿ ಮಂಚದ ಕಾಳಿಕಾಂಬ, ವಿಜಯನಗರೇಶ್ವರಿ, ಹಿರಿಯ ಮಂಚದ ಕಾಳಿಕಾಂಬ, ಮನೆಯಮ್ಮ(ಲಕ್ಷ್ಮಿದೇವಿ), ಬೆಟ್ಟದ ಅರಸಮ್ಮ, ಕನ್ನಕಡ್ಡಯ್ಯ, ಮುಖದ ದೇವರು, ಮೂಗದೇವಮ್ಮ, ಪಟ್ಟಲದಮ್ಮ ಎಂಬ ದೇವರನ್ನು ಗ್ರಾಮಸ್ಥರು ಪೂಜಿಸಿಕೊಂಡು ಬಂದಿದ್ದಾರೆ.
ಸಪ್ತ ಮಾತೃಕೆಯರು ಶಕ್ತಿದೇವತೆಗಳ ಎಂಬ ನಂಬಿಕೆಯಿಂದ ಅನಾಧಿ ಕಾಲದಿಂದಲೂ ದೊಡ್ಡಹಬ್ಬವನ್ನು ಕಲ್ಕುಣಿ, ದೊಡ್ಡಗೌಡನ ಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ಪುಟ್ಟೇಗೌಡನಕೊಪ್ಪಲು, ಚಿಕ್ಕಕಲ್ಕುಣ ಸೇರಿದಂತೆ ಹಲವು ಗ್ರಾಮಗಳ ಜನರು ಆಚರಣೆ ಮಾಡಿಕೊಂಡು ಬಂದಿದ್ದು, ಪ್ರತಿ ಐದು ವರ್ಷಗಳೊಮ್ಮೆ ನಡೆಯುತ್ತಿದ್ದ ಹಬ್ಬವು ಕೋವಿಂಡ್ ನಿಂದ 11 ವರ್ಷಗಳ ನಂತರ ನಡೆಯುತ್ತಿದೆ.ಈ ಸಂಬಂಧ ಗ್ರಾಮದಲ್ಲಿ ಮಂಚದ ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎನ್.ನಂಜೇಗೌಡ ಮಾತನಾಡಿ, ಕಲ್ಕುಣಿ ಗ್ರಾಮವು ಸಾಕಷ್ಟು ಇತಿಹಾಸ ಹೊಂದಿದೆ. ಮೈಸೂರು ರಾಜ ಮನೆತನದ ರಾಜಗುರುಗಳ ವಂಶಸ್ಥರು ನೆಲೆಸಿದ್ದ ಸೇರಿದಂತೆ ಅನೇಕ ಐತಿಹಾಸಿಕ ಸಾಕ್ಷಿಗಳ ಕುರುಹುಗಳನ್ನು ಇಲ್ಲಿ ಕಾಣಬಹುದು. ಈ ಸಂಬಂಧ ಹಬ್ಬದ ಆಚರಣೆ ವೇಳೆ ಪುಸ್ತಕ ಬಿಡುಗಡೆಯಾಗಲಿದೆ. ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಅಲ್ಲದೇ ಕಲ್ಕುಣಿಯು ಪರಮೇಶ್ವರನು ವಿವಿಧ ನಾಮಗಳಿಂದ ನೆಲೆಗೊಂಡಿರುವ ಪುಣ್ಯ ಭೂಮಿ ಎಂದೇ ಪ್ರಸಿದ್ಧಿಗೊಂಡಿದೆ ಎಂದು ವಿವರಿಸಿದರು.
ಆಡಳಿತ ಮಂಡಳಿ ಸದಸ್ಯ ಕೆ.ಜೆ.ದೇವರಾಜು ಮಾತನಾಡಿ, 9 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಯಾವುದೇ ತೊಂದರೆಯಾಗದಂತೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಮತ್ತು ಸಹಕಾರದೊಂದಿಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸೆಸ್ಕ್, ಸ್ಥಳೀಯ ಗ್ರಾಪಂ ಸೇರಿದಂತೆ ಎಲ್ಲ ಇಲಾಖೆಗಳ ನೆರವಿನೊಂದಿಗೆ ಸ್ವಚ್ಛತೆ ಹಾಗೂ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಹಾಗೂ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮಾದನಾಯಕ್, ಸದಸ್ಯ ಪರಮೇಶ್, ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಸೋಮಶೇಖರ್, ಚಂದನ್, ಮಹದೇವು ಪಾಲ್ಗೊಂಡಿದ್ದರು.
ಹಬ್ಬದ ವಿಶೇಷತೆಗಳು:ತಾಲೂಕಿನ ಕಲ್ಕುಣಿ ಸೇರಿದಂತೆ ಅಕ್ಕಪಕ್ಕದ ಏಳು ಗ್ರಾಮಗಳಲ್ಲಿ ಆಚರಿಸುವ ಹಬ್ಬದಲ್ಲಿ ಜ.15ರ ಗುರುವಾರ ಗ್ರಾಮದ ರಂಗ ಆವರಣದಲ್ಲಿ ಚಿಕ್ಕಮ್ಮತಾಯಿ, ದೊಡ್ಡಮ್ಮತಾಯಿ ಪ್ರತಿಷ್ಥಾಪಿಸಿ ಕಲ್ಲಿನ ಬಳಿ ಧೂಳು ಮರಿ ಒಡೆದು ರಸಮುದ್ದೆ ತಯಾರಿಸಿ ಮನೆಯಮ್ಮ, ಲಕ್ಷ್ಮಿದೇವಿ ಬಲಿ ದೇವರ ಗುಡ್ಡಪ್ಪ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಮೂಲಕ ದೊಡ್ಡಕೆರೆಯಿಂದ ವಿಜಯ ನಗರೇಶ್ವರಿ ದೇವರನ್ನು ಕೇಲು ತರುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಜ.16ರಂದು ವಿಜಯನಗರೇಶ್ವರಿ ದೇವಸ್ಥಾನದಿಂದ ಹೆಬ್ಬಾರೆಗಳನ್ನು ತೆಗೆದುಕೊಂಡು ಮಂಚದ ಕಾಳಿಕಾಂಬ ದೇವರು ಸೇರಿದಂತೆ ಸಪ್ತಮಾತೃಕೆ ದೇವರ ಉತ್ಸವಮೂರ್ತಿಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಜ.17 ಕಂಚಿನ ಹೆಬ್ಬಾರೆಯೊಂದಿಗೆ ದೊಡ್ಡೇಗೌಡನಕೊಪ್ಪಲು ಹಾಗೂ ಚಿಕ್ಕಮಾಳಿಗೆಕೊಪ್ಪಲು ಗ್ರಾಮಗಳಿಗೆ, ಜ.18ರಂದು ಪುಟ್ಟೇಗೌಡನಕೊಪ್ಪಲು, ಒಂಟಿಮನೆಕೊಪ್ಪಲು, ಸಿ.ವಿ.ಕೊಪ್ಪಲು ಹೋಗಿ ಹಕ್ಕುಪಡಿ ಪಡೆಯುವುದು ಹಾಗೂ ಮಂಚದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಚಂದ್ರಮಂಡಲ ನಿರ್ಮಿಸಲಾಗುತ್ತದೆ.ಜ.19ರಂದು ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವಮೂರ್ತಿಗಳ ಮೆರವಣಿಗೆ, ಜಯ20ರಂದು ಹೂವಿನ ಕೋಲು ಉತ್ಸವ, ದೇವರ ಕುಣಿಯುವುದು, ಒಕ್ಕಣೆ ಹೇಳುವುದು ನಡೆಯಲಿದೆ. ಜ.21ರಂದು ಕನ್ನಕಡ್ಡಯ್ಯ, ಮನೆಯಮ್ಮ, ಲಕ್ಷ್ಮಿದೇವರ ಬಲಿದೇವರ ಗುಡ್ಡಪ್ಪರವರೊಂದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಲಿವೆ.
ಜ.22ರಂದು ಕಲ್ಕುಣಿ ಮಯೂರ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಪಿ.ನಾಗರತ್ನಮ್ಮ ಅವರು ಬರೆದಿರುವ ಕಲ್ಕುಣಿ ನಾಡು ಮತ್ತು ದೊಡ್ಡಹಬ್ಬದ ಆಚರಣೆಯ ವಿಧಿವಿಧಾನಗಳ ಪುಸ್ತಕ ಬಿಡುಗಡೆ ನಡೆಯಲಿದೆ.ಜ.23ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೊಡ್ಡೇಗೌಡನಕೊಪ್ಪಲು ಹಾಗೂ ಚಿಕ್ಕಮಾಳಿಗೆಕೊಪ್ಪಲು ಗ್ರಾಮಸ್ಥರಿಂದ ರಾವಳೇಶ್ವರ(ಊರಮುಂದಲಯ್ಯ) ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅಲ್ಲದೇ ದೇವರ ಉತ್ಸವಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮಂಚದ ಕಾಳಿಕಾಂಬ ದೇವಸ್ಥಾನಕ್ಕೆ ಸೇರಿಸುವುದು ನಡೆಯಲಿದೆ.