ಗ್ರಾಚ್ಯುಟಿ ಜಾರಿಗೊಳಿಸಲು ಆಗ್ರಹ

| Published : May 18 2025, 01:08 AM IST

ಸಾರಾಂಶ

ನಿವೃತ್ತರಾಗಿರುವ ಅನೇಕರು ಮರಣ ಹೊಂದಿದ್ದಾರೆ, ಇನ್ನೂ ಕೆಲವರು ವಯೋ ಸಹಜ ಕಾಯಿಲೆಗೆ ತುತ್ತಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 2011- 12 ರಿಂದ ಗ್ರಾಚ್ಯುಟಿ (ನಿವೃತ್ತಿ ಉಪಧನ) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯವರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅಡಿಯಲ್ಲಿ ಸೌಲಭ್ಯ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. 1975ರಲ್ಲಿ ಪ್ರಾರಂಭವಾದ ಐಸಿಡಿಸಿ ಯೋಜನೆಗೆ 50 ವರ್ಷವಾಗುತ್ತಿದ್ದು, 2011– 12ನೇ ಸಾಲಿನಿಂದಲೇ ಅನೇಕರು ನಿವೃತ್ತರಾಗುತ್ತಾ ಬಂದಿದ್ದಾರೆ. ಅವರನ್ನೂ ಸೇರಿದಂತೆ ನಿವೃತ್ತರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ನಿವೃತ್ತರಾಗಿರುವ ಅನೇಕರು ಮರಣ ಹೊಂದಿದ್ದಾರೆ, ಇನ್ನೂ ಕೆಲವರು ವಯೋ ಸಹಜ ಕಾಯಿಲೆಗೆ ತುತ್ತಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಅವರಿಗೆ ನೆರವಾಗಬೇಕಿದೆ. 2023ರ ನಂತರ ನಿವೃತ್ತರಾದವರಿಗೆ ಗ್ರಾಚ್ಯುಟಿ ನೀಡುವ ಸರ್ಕಾರದ ನಿರ್ಧಾರವನ್ನು ಬದಲಾಯಿಸಿ 1975 ರಿಂದ ಸೇವೆಗೆ ಸೇರಿ 2011–12 ರಿಂದ ನಿವೃತ್ತರಾದವರಿಗೆ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.ಫೆಡರೇಷನ್ ಜಿಲ್ಲಾಧ್ಯಕ್ಷೆ ಪಿ.ಎಂ. ಸರೋಜಮ್ಮ, ಪ್ರಧಾನ ಕಾರ್ಯದರ್ಶಿ ವೈ. ಮಹದೇವಮ್ಮ, ಖಜಾಂಜಿ ಗಿರಿಜಾ, ಮುಖಂಡರಾದ ಡಿ. ಜಗನ್ನಾಥ್, ನಿವೃತ್ತ ಅಂಗನವಾಡಿ ನೌಕರರು ಇದ್ದರು.