ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಕಲೆಯ ಸೇವೆಯಲ್ಲಿ ನಿರತರಾಗಿದ್ದಾರೆ. ಆಧುನಿಕ ಮನರಂಜನಾ ಮಾಧ್ಯಮಗಳ ಅಬ್ಬರದ ನಡುವೆಯೂ ಸಾಂಪ್ರದಾಯಿಕ ಕಲೆ ಜೀವಂತವಾಗಿಟ್ಟಿರುವುದು ಅವರ ಹೆಗ್ಗಳಿಕೆ

ಮಂಜುನಾಥ ಕೆ.ಎಂ. ಬಳ್ಳಾರಿ

ಅಳಿವಿನಂಚಿನಲ್ಲಿರುವ ತೊಗಲುಗೊಂಬೆಯಾಟ ಕಲೆಗೆ ಜೀವ ತುಂಬಿ ನಾಡಿನಾದ್ಯಂತ ಜಾನಪದ ಸೊಗಡನ್ನು ಪಸರಿಸುತ್ತಿರುವ ಬಳ್ಳಾರಿಯ ಹಿರಿಯ ಕಲಾವಿದೆ ಹುಲಿಗೆಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಒಲಿದುಬಂದಿದೆ. ತಂದೆಯಿಂದ ಬಳವಳಿಯಾಗಿ ಬಂದ ಅಪರೂಪದ ಕಲೆ ಉಳಿಸಿ ಬೆಳೆಸುವುದರ ಜತೆಗೆ ಸಾಮಾಜಿಕ ಜಾಗೃತಿಯ ಪ್ರಬಲ ಮಾಧ್ಯಮವನ್ನಾಗಿ ರೂಪಿಸಿದ ಅವರ ಸಾಧನೆಗೆ ಇದೀಗ ರಾಜ್ಯಮಟ್ಟದ ಮನ್ನಣೆ ದೊರೆತಿದೆ.

ತೊಗಲುಗೊಂಬೆಯಾಟದ ಖ್ಯಾತ ಕಲಾವಿದ ದಿ. ಹುಲೆಪ್ಪ ಅವರ ಪುತ್ರಿಯಾದ ಹುಲಿಗೆಮ್ಮ, ಹತ್ತನೇ ವಯಸ್ಸಿನಲ್ಲಿಯೇ ತಂದೆಯೊಂದಿಗೆ ಕಲಾಪ್ರದರ್ಶನ ಆರಂಭಿಸಿದವರು. ಓದು, ಬರೆಹ ಕಲಿತವರಲ್ಲ. ಬಾಲ್ಯದಲ್ಲಿ ಕಲಿತ ಗೊಂಬೆಯಾಟವನ್ನೇ ಬದುಕಿನ ಉಸಿರಾಗಿಸಿಕೊಂಡ ಅವರು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಕಲೆಯ ಸೇವೆಯಲ್ಲಿ ನಿರತರಾಗಿದ್ದಾರೆ. ಆಧುನಿಕ ಮನರಂಜನಾ ಮಾಧ್ಯಮಗಳ ಅಬ್ಬರದ ನಡುವೆಯೂ ಸಾಂಪ್ರದಾಯಿಕ ಕಲೆ ಜೀವಂತವಾಗಿಟ್ಟಿರುವುದು ಅವರ ಹೆಗ್ಗಳಿಕೆ.

ಪೌರಾಣಿಕ ಕಥೆಗಳಿಗೆ ಸಾಮಾಜಿಕ ಸ್ಪರ್ಶ: ರಾಮಾಯಣ, ಮಹಾಭಾರತದ ಕಥಾಪ್ರಸಂಗಗಳಿಗೆ ಸೀಮಿತವಾಗಿದ್ದ ತೊಗಲುಗೊಂಬೆಯಾಟಕ್ಕೆ ಹುಲಿಗೆಮ್ಮ ಹೊಸ ಆಯಾಮ ನೀಡಿದ್ದಾರೆ. ಪಂಚವಟಿ, ಅರಣ್ಯಕಾಂಡ, ಸುಂದರಕಾಂಡ, ಯುದ್ಧಕಾಂಡ, ಸೀತಾಪಹರಣ, ರಾವಣ ಸಂಹಾರ ಮುಂತಾದ ಪೌರಾಣಿಕ ಪ್ರಸಂಗಗಳ ಜತೆಗೆ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಮೂಡಿಸುವ ಪ್ರದರ್ಶನ ರೂಪಿಸಿದ್ದಾರೆ.

ವಿಶೇಷವಾಗಿ ಮರಳಿ ಬಾ ಶಾಲೆಗೆ ಎಂಬ ತೊಗಲುಗೊಂಬೆಯಾಟದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸಿದ್ದಾರೆ.

ಮೈಸೂರು ದಸರಾ, ಹಂಪಿ ಉತ್ಸವ, 2020ರ ಕಲಬುರಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಧಾರವಾಡ, ಗೋಕರ್ಣ ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯಗಳಲ್ಲಿಯೂ ತೊಗಲುಗೊಂಬೆಯಾಟದ ಸೊಗಡನ್ನು ಪರಿಚಯಿಸಿದ್ದಾರೆ.

ಸರ್ಕಾರದ ಯೋಜನೆಗಳಿಗೂ ಪ್ರಚಾರ: 2016ರಿಂದ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೊಗಲುಗೊಂಬೆಯಾಟದ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಸದಸ್ಯೆಯಾಗಿರುವ ಹುಲಿಗೆಮ್ಮ, ಕುಟುಂಬದವರೊಂದಿಗೆ ಕಲಾಪ್ರದರ್ಶನ ಮುಂದುವರಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮುಂದಿನ ಪೀಳಿಗೆಗೂ ಕಲೆ ಪರಿಚಯಿಸುತ್ತಿದ್ದಾರೆ.

ಪ್ರಶಸ್ತಿ ಬಂದಿದೆ ಎಂದು ಹೇಳಿದರು. ತುಂಬಾ ಖುಷಿಯಾಯಿತು. ಇಷ್ಟು ವರ್ಷಗಳ ಕಾಲ ತೊಗಲುಗೊಂಬೆಯ ಹಿಂದೆ ನಿಂತು ಅವುಗಳಿಗೆ ಜೀವ ತುಂಬಿ ಜನರನ್ನು ಮನರಂಜಿಸಿದೆ. ನನ್ನ ಬಹು ವರ್ಷಗಳ ಕೆಲಸವನ್ನು ಪರಿಗಣಿಸಿ ಪ್ರಶಸ್ತಿ ನೀಡಿದ ರಾಜ್ಯ ಸರ್ಕಾರ ಹಾಗೂ ನನಗೆ ಹಾರೈಸಿದ ಎಲ್ಲರಿಗೂ ಅನಂತ ನಮಸ್ಕಾರ ತಿಳಿಸುತ್ತೇನೆ ಎಂದು ಬಳ್ಳಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಲಿಗೆಮ್ಮ ತಿಳಿಸಿದ್ದಾರೆ.