ಶಿಕ್ಷಕ ಪುರುಷೋತ್ತಮ್‌ಗೆ ರಾಜ್ಯ ಪ್ರಶಸ್ತಿ

| Published : Sep 07 2025, 01:00 AM IST

ಶಿಕ್ಷಕ ಪುರುಷೋತ್ತಮ್‌ಗೆ ರಾಜ್ಯ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದೂರು ಹೋಬಳಿಯ ಸುಳಗೋಡು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ಪುರುಷೋತ್ತಮ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಉನ್ನತಿಗಾಗಿ ಶಿಕ್ಷಕ ಪುರುಷೋತ್ತಮ್ ಅವರು ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಹಾಗೂ ಸ್ವಂತ ಹಣವನ್ನು ಖರ್ಚು ಮಾಡಿ ಶಾಲಾ ವಾಹನವನ್ನು ಖರೀದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕುಂದೂರು ಹೋಬಳಿಯ ಸುಳಗೋಡು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ಪುರುಷೋತ್ತಮ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಗಳು ಇವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದ ಇವರನ್ನು ಗುರುತಿಸಿ ಕನ್ನಡಪ್ರಭ ಸೆಪ್ಟಂಬರ್‌ ಐದರಂದು ಇವರ ಬಗ್ಗೆ ಲೇಖನವನ್ನು ಪ್ರಕಟಿಸಿತ್ತು. ಇವರು ಈ ಶಾಲೆ ಶಿಕ್ಷಕರಾಗಿ ನಿಯುಕ್ತಿಗೊಂಡ ನಂತರ ಶಾಲೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು, ಇಡೀ ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರುವಂತೆ ಮಾಡಿದ್ದಾರೆ. ತಮ್ಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪರಿಣಾಮ, ಈ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತಲೂ ಕಲಿಕೆಯಲ್ಲಿ ಒಂದು ಪಟ್ಟು ಹೆಚ್ಚಿದ್ದು, ಇದರಿಂದಾಗಿ ಸುತ್ತಮುತ್ತಲ ಗ್ರಾಮಸ್ಥರೆಲ್ಲರೂ ಈ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಈ ಶಾಲೆಯಲ್ಲಿ ಈಗ ಎಲ್‌ಕೆಜಿಯಿಂದ ಏಳನೇ ತರಗತಿವರೆಗೂ ಇಂಗ್ಲಿಷ್ ಮೀಡಿಯಂನಲ್ಲಿ ಶಿಕ್ಷಣ ನೀಡಲಾಗುತ್ತಿದ್ದು. ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪುರುಷೋತ್ತಮ್ ಅವರ ಪರಿಶ್ರಮದಿಂದಾಗಿ ಈ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ.

ಶಾಲೆಯ ಉನ್ನತಿಗಾಗಿ ಶಿಕ್ಷಕ ಪುರುಷೋತ್ತಮ್ ಅವರು ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಹಾಗೂ ಸ್ವಂತ ಹಣವನ್ನು ಖರ್ಚು ಮಾಡಿ ಶಾಲಾ ವಾಹನವನ್ನು ಖರೀದಿಸಿದ್ದು ಪ್ರಮುಖವಾದರೆ, ಶುದ್ಧವಾದ ಕುಡಿಯುವ ನೀರಿಗಾಗಿ ಅಕ್ವಾಗಾರ್ಡ್, ಸಿಸಿ ಕ್ಯಾಮೆರಾ, ಸ್ಮಾರ್ಟ್‌ಕ್ಲಾಸ್‌ಗೆ ಪ್ರೊಜೆಕ್ಟರ್‌, ಕಂಪ್ಯೂಟರ್‌, ಎಲ್ಲಾ ಕೊಠಡಿಗಳಿಗೂ ಡೆಸ್ಕ್, ಟೇಬಲ್, ಗ್ರೀನ್ ಬೋರ್ಡ್, ಸುಸಜ್ಜಿತ ನಲಿ-ಕಲಿ ಕೊಠಡಿ, ಶಾಲೆಯ ಸುತ್ತ ಚರಂಡಿ, ಕಾಂಪೌಂಡ್‌, ಧ್ವಜಸ್ತಂಭಗಳು, ಯುಪಿಎಸ್ ಸೇರಿದಂತೆ ಹಲವಾರು ಪರಿಕರಗಳನ್ನು ಈ ಶಾಲೆಗೆ ಒದಗಿಸಿದ್ದಾರೆ. ಇದರ ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಕೂರುವ ಶಿಕ್ಷಕರ ನಡುವೆ ಇಂತಹ ಕೆಲವು ಶಿಕ್ಷಕರಿದ್ದರೆ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚುವ ಸಂಭವವೇ ಬರುವುದಿಲ್ಲ.

ಪುರುಷೋತ್ತಮ್ ಅವರ ಕೆಲಸಗಳಿಂದ ಪ್ರೇರೇಪಿತರಾಗಿ ಪ್ರತಿ ಸರ್ಕಾರಿ ಶಾಲೆಯಲ್ಲೂ ಒಬ್ಬರು ಶಿಕ್ಷಕರು ಇವರ ಮಾರ್ಗದಲ್ಲಿ ನಡೆದರೆ ಇವರು ಪಟ್ಟ ಶ್ರಮ ಸಾರ್ಥಕವಾದಂತಾಗುತ್ತದೆ. ಪುರುಷೋತ್ತಮ್ ಅವರು ಈ ಶಾಲೆಗೆ ನಿಯೋಜನೆಗೊಂಡ ನಂತರ ಈ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದ್ದು, ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಪೋಷಕರು ಈ ಶಾಲೆಗೆ ಸೇರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದಕ್ಕಾಗಿ ಶಿಕ್ಷಕ ಪುರುಷೋತ್ತಮ್ ಅವರು ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಂತಾಗಿದ್ದು, ರಾಜ್ಯ ಸರ್ಕಾರ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಬಿಇಒ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ತಿಳಿಸಿದ್ದಾರೆ.* ಹೇಳಿಕೆ

ಶಾಲೆಯೇ ದೇವಾಲಯ ಮಕ್ಕಳೇ ದೇವರು ಎಂದು ಭಾವಿಸಿ ಹಾಗೂ ತನಗೆ ಎಲ್ಲವನ್ನೂ ನೀಡಿದ ಶಿಕ್ಷಣ ಇಲಾಖೆಗೆ ಕೈಲಾದದ್ದನ್ನು ಕೊಡುಗೆಯಾಗಿ ನೀಡಬೇಕೆಂಬ ಮನಸಿನಿಂದ ನಾನು ದಾನಿಗಳ ಸಾಕಾರ ಪಡೆದು ಶಾಲೆಗೆ ಅಗತ್ಯವಾದ ವಸ್ತುಗಳನ್ನು ಒದಗಿಸಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಉತ್ತಮಗೊಂಡಿದೆ. ರಾಜ್ಯ ಸರ್ಕಾರ ತನಗೆ ಪ್ರಶಸ್ತಿ ನೀಡುವುದು ಸಂತಸ ತಂದಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.

- ಪುರುಷೋತ್ತಮ್‌, ಪ್ರಶಸ್ತಿ ಪುರಸ್ಕೃತ ಶಿಕ್ಷಕ