ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ

| Published : Jan 17 2025, 12:47 AM IST

ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ರಾಜ್ಯಮಟ್ಟದ ಉತ್ತಮ ಸಂಘ ಪ್ರಶಸ್ತಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ಆಯ್ಕೆಯಾಗಿದೆ. ತುಮಕೂರಿನಲ್ಲಿ ಜ.18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಜ.18-19ರಂದು ತುಮಕೂರಿನ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪ್ರದಾನ

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ರಾಜ್ಯಮಟ್ಟದ ಉತ್ತಮ ಸಂಘ ಪ್ರಶಸ್ತಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ಆಯ್ಕೆಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ರಜತ ಮಹೋತ್ಸವ ಹಿನ್ನೆಲೆ ಮತ್ತು 2024ನೇ ಸಾಲಿನಲ್ಲಿ ಹಮ್ಮಿಕೊಂಡಿದ್ದ ನಿರಂತರ ಕಾರ್ಯ ಚಟುವಟಿಕೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಜ.18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2024ನೇ ಸಾಲಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ, ಜನಪ್ರತಿನಿಧಿ- ಅಧಿಕಾರಿ - ಗಣ್ಯರೊಂದಿಗೆ ಸಂವಾದ, ಸ್ಥಾಪನಾ ದಿನಾಚರಣೆ, ವಿವಿಧ ಮಾಹಿತಿ ಕಾರ್ಯಾಗಾರ, ಸಾಮಾಜಿಕ ಬದ್ಧತೆಯ ಕಾರ್ಯಕ್ರಮ, ಪತ್ರಕರ್ತರ ಪರ ಹೋರಾಟ, ಚರ್ಚಾ ಕಾರ್ಯಕ್ರಮ, ಪತ್ರಿಕಾ ದಿನಾಚರಣೆ, ಜನಜಾಗೃತಿ ಕಾರ್ಯಕ್ರಮ, ಗ್ರಂಥಾಲಯ ಉದ್ಘಾಟನೆ, ವಾರ್ಷಿಕ ಪ್ರವಾಸ, ರಜತ ಕ್ರೀಡಾ ಸಂಭ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ.ಅಲ್ಲದೇ ಉಡುಪಿ ಪತ್ರಕರ್ತರ ಸಂಘವು 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಕೂಡ ಭಾಜನವಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದಲ್ಲಿ ಉಡುಪಿ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಎಲ್ಲ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಜಿಲ್ಲಾ ಸಂಘಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಜಿಲ್ಲಾ ಸಂಘದ ಸದಸ್ಯ ಕಾರ್ಕಳದ ಹರಿಪ್ರಸಾದ್ ನಂದಳಿಕೆ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ಆರ್.ಎಲ್. ವಾಸುದೇವ ರಾವ್ ಪ್ರಶಸ್ತಿ (ಅರಣ್ಯ ಅತ್ಯುತ್ತಮ ವರದಿ)ಗೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.