ಸುಹಾಸ್‌ ಶೆಟ್ಟಿ ಹತ್ಯೆ ಸಮಗ್ರ ತನಿಖೆಗೆ ಎನ್‌ಐಎಗೆ ವಹಿಸಲು ರಾಜ್ಯ ಬಿಜೆಪಿ ನಿಯೋಗ ಕಮಿಷನರ್‌ ಭೇಟಿ ಮಾಡಿ ಒತ್ತಾಯ

| Published : May 10 2025, 01:09 AM IST

ಸುಹಾಸ್‌ ಶೆಟ್ಟಿ ಹತ್ಯೆ ಸಮಗ್ರ ತನಿಖೆಗೆ ಎನ್‌ಐಎಗೆ ವಹಿಸಲು ರಾಜ್ಯ ಬಿಜೆಪಿ ನಿಯೋಗ ಕಮಿಷನರ್‌ ಭೇಟಿ ಮಾಡಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರು, ಶಾಸಕರನ್ನೊಳಗೊಂಡ ರಾಜ್ಯ ಬಿಜೆಪಿ ನಿಯೋಗ ಗುರುವಾರ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರನ್ನು ಭೇಟಿಯಾಗಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ವಹಿಸಲು ಒತ್ತಾಯಿಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕೈವಾಡದ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ಭದ್ರತಾ ಏಜೆನ್ಸಿ)ಗೆ ವಹಿಸಬೇಕು ಎಂದು ಕರ್ನಾಟಕ ಬಿಜೆಪಿ ಒತ್ತಾಯಿಸಿದೆ.

ಸಂಸದರು, ಶಾಸಕರನ್ನೊಳಗೊಂಡ ರಾಜ್ಯ ಬಿಜೆಪಿ ನಿಯೋಗ ಗುರುವಾರ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್‌ ಕುಮಾರ್‌, ಸುಹಾಸ್‌ ಶೆಟ್ಟಿ ಕೊಲೆಗೆ ಸಂಬಂಧಿಸಿದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಒಟ್ಟಾಗಿ ಪೊಲೀಸ್‌ ಆಯುಕ್ತರೊಂದಿಗೆ ಚರ್ಚೆ ಮಾಡಿ ಸಾರ್ವಜನಿಕ ವಲಯದಲ್ಲಿ ಮತ್ತು ನಮ್ಮಲ್ಲಿರುವ ಅನುಮಾನ ಹೇಳಿದ್ದೇವೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲೇಬೇಕು. ಈ ಕೃತ್ಯದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೃತ್ಯಕ್ಕೆ ಅಂತಾರಾಷ್ಟ್ರೀಯವಾಗಿ ಹಣಕಾಸಿನ ನೆರವು ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಾಗಾಗಿ ಸ್ಥಳೀಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬುದು ಗೃಹಸಚಿವರ ಹೇಳಿಕೆಯಿಂದ ಗೊತ್ತಾಗಿದೆ ಎಂದು ಹೇಳಿದರು.ಪ್ರಕರಣದಲ್ಲಿ ಈಗ ಬಂಧಿತ ಎಂಟು ಮಂದಿ ಮಾತ್ರ ಇರುವುದಲ್ಲ. ನೇರ ಕೈವಾಡ ಇರುವ ಎಲ್ಲರನ್ನು ಬಂಧಿಸಬೇಕು. ಪರೋಕ್ಷವಾಗಿ ಸಹಕಾರ ಮಾಡಿದವರು, ಆಶ್ರಯ ನೀಡಿದವರು, ಸುಹಾಸ್‌ ಶೆಟ್ಟಿಯ ಚಲನ ವಲನ ತಿಳಿಸಿದವರು, ವಾಹನ ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹಣಕಾಸಿನ ನೆರವು ನೀಡಿದ ಎಲ್ಲ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳದಲ್ಲಿ ಸಹಕಾರ ಮಾಡಿದ ಮಹಿಳೆಯರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಸುನಿಲ್‌ ಕುಮಾರ್‌ ಹೇಳಿದರು.

ಸಿದ್ದಾಂತಕ್ಕಾಗಿ ಹೋರಾಟ:

ರೌಡಿಶೀಟ್‌ ಪೊಲೀಸರ ಒಂದು ಪ್ರಕ್ರಿಯೆ. ಮೂರಕ್ಕಿಂತ ಹೆಚ್ಚು ಪ್ರಕರಣ ಇರುವವರಿಗೆ ರೌಡಿಶೀಟ್‌ ಹಾಕಲಾಗುತ್ತದೆ. ಕೇಸು ಇರುವವರೆಲ್ಲರೂ ಕ್ರಿಮಿನಲ್‌ಗಳಲ್ಲ. ಸುಹಾಸ್‌ ಶೆಟ್ಟಿ ಸಿದ್ಧಾಂತಕ್ಕಾಗಿ ಹೋರಾಡಿದ್ದ ವ್ಯಕ್ತಿ ಎಂದು ಸುನಿಲ್‌ ಕುಮಾರ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.11ರಂದು ಸುಹಾಸ್‌ ಮನೆಗೆ ನಡ್ಡಾ ಮೇ 11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಧರ್ಮಸ್ಥಳದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಅವರು ಸುಹಾಸ್‌ ಶೆಟ್ಟಿಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದು ಶಾಸಕ ಸುನಿಲ್‌ ಕುಮಾರ್‌ ತಿಳಿಸಿದರು.ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಭಾಗೀರಥಿ ಮುರುಳ್ಯ, ಕಿಶೋರ್‌ ಕುಮಾರ್‌ ಪುತ್ತೂರು, ಪ್ರತಾಪ ಸಿಂಹ ನಾಯಕ್‌, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಜಗದೀಶ್‌ ಶೇಣವ ಮತ್ತಿತರರ ನಿಯೋಗ ಪೊಲೀಸ್‌ ಕಮಿಷನರ್‌ ಜೊತೆ ಸುಮಾರು ಒಂದು ತಾಸು ಚರ್ಚೆ ನಡೆಸಿತು.