ರಾಜ್ಯ ಬಜೆಟ್: ರೇಷ್ಮೆನಗರಿ ಜನರ ಬೆಟ್ಟದಷ್ಟು ನಿರೀಕ್ಷೆ

| Published : Mar 07 2025, 12:49 AM IST

ರಾಜ್ಯ ಬಜೆಟ್: ರೇಷ್ಮೆನಗರಿ ಜನರ ಬೆಟ್ಟದಷ್ಟು ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯವರೇ ಆಗಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ 2025- 26ನೇ ಸಾಲಿನ ಆಯವ್ಯಯದಲ್ಲಿ ರಾಮನಗರ ಜಿಲ್ಲೆಗೆ ಭರ್ಜರಿ ಕೊಡುಗೆ ಸಿಗಬಹುದೆಂದು ಜನರು ನಿರೀಕ್ಷೆ ಹೊಂದಿದ್ದಾರೆ.

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯವರೇ ಆಗಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ 2025- 26ನೇ ಸಾಲಿನ ಆಯವ್ಯಯದಲ್ಲಿ ರಾಮನಗರ ಜಿಲ್ಲೆಗೆ ಭರ್ಜರಿ ಕೊಡುಗೆ ಸಿಗಬಹುದೆಂದು ಜನರು ನಿರೀಕ್ಷೆ ಹೊಂದಿದ್ದಾರೆ. ಈಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೆ ಇದ್ದಾರೆ. ಹೀಗಾಗಿ ಬಜೆಟ್ ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಘೋಷಣೆ ಹಾಗೂ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಜೀವ ನೀಡಿ ಪೂರ್ಣಗೊಳಿಸುವ ಸವಾಲು ಕೂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರ ಮೇಲಿದೆ.

ಜಿಲ್ಲೆಯ ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟೆ ಯೋಜನೆ, ರಾಜೀವ್ ಗಾಂಧಿ ಆರೋಗ್ಯ ವಿವಿ, ಪ್ರವಾಸೋದ್ಯಮ ಉತ್ತೇಜನೆ, ಕೆಂಗೇರಿ - ಬಿಡದಿ ಹಾಗೂ ಹಾರೋಹಳ್ಳಿವರೆಗೆ ಮೆಟ್ರೋ ವಿಸ್ತರಣೆ, ನೂತನ ತಾಲೂಕು ಹಾರೋಹಳ್ಳಿಗೆ ಅಗತ್ಯ ಸೌಲಭ್ಯ ಹಾಗೂ ವಿಶ್ವ ವಿಖ್ಯಾತ ಬೊಂಬೆ ಉದ್ಯಮಕ್ಕೆ ನೆರವು, ಬಿಡದಿ ಮತ್ತು ಹಾರೋಹಳ್ಳಿ ಹೊರತು ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಅಗತ್ಯವಿದೆ. ಅಲ್ಲದೆ, ಈಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದರೆ ನಿರುದ್ಯೋಗಿ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ.

ಜಿಲ್ಲೆಯ ಜನರ ಜೀವನಾಧಾರವಾಗಿರುವ ರೇಷ್ಮೆ, ಹಾಲು ಹಾಗೂ ಮಾವಿನ ಹಣ್ಣಿನ ಬೆಳೆಗಳಿಗೆ ಉತ್ತೇಜನ, ಮಾರುಕಟ್ಟೆ ಹಾಗೂ ಸಂಸ್ಕರಣ ಸೌಲಭ್ಯ ಬೇಕಾಗಿದೆ. ಅಲ್ಲದೆ, ತೆಂಗು ಬೆಳೆಗಾರರು ನೀರಾ ಇಳಿಸಲು ಉತ್ಸಾಹ ತೋರುತ್ತಿದ್ದು, ಸರ್ಕಾರ ನೀರಾ ಉದ್ಯಮಕ್ಕೆ ನೆರವು ನೀಡಲಿದೆಯೇ ಎಂಬ ಹತ್ತಾರು ನಿರೀಕ್ಷೆಗಳು ಬಜೆಟ್ ಮೇಲಿದೆ.

ಬಾಕ್ಸ್‌...........

ರೇಷ್ಮೆನಗರಿಗರ ನಿರೀಕ್ಷೆಗಳೇನು?

1.ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ಪೂರಕವಾಗಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ನಗರಗಳನ್ನು ಅವಳಿ ನಗರಗಳನ್ನಾಗಿ ಘೋಷಿಸುವುದು.

2.ರಾಮನಗರ ಜಿಲ್ಲೆ ಸ್ಥಾಪನೆಯಾಗಿ 18 ವರ್ಷಗಳೇ ಕಳೆದಿದ್ದರೂ ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿಗೆ ವೇಗ ನೀಡಿ.

3. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮೈಸೂರು ಕಡೆಗೆ ಪ್ರಯಾಣಿಸುವ ಜನರಿಗಾಗಿ ಬಸ್ ನಿಲ್ದಾಣ ಸ್ಥಾಪನೆ.

4. ಅಳಿವಿನ ಅಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು ಬ್ರೀಡಿಂಗ್ ಸೆಂಟರ್ ಸ್ಥಾಪನೆ.

5.ರಾಮನಗರದಲ್ಲಿ ಸ್ಲಂ ಕ್ಲಿಯರೆನ್ಸ್ ಬೋರ್ಡಿನಿಂದ ದಶಕದ ಹಿಂದೆ ಮನೆ ನಿರ್ಮಿಸಿಕೊಡುವ ವಾಗ್ದಾನ ಪೂರೈಕೆ. ಬಡವರಿಗೆ ಸೂರು ಮತ್ತು ನಿವೇಶನ.

ಬಾಕ್ಸ್‌..............

ಬೊಂಬೆನಗರಿಗರ ನಿರೀಕ್ಷೆಗಳೇನು ?

1.ಬೊಂಬೆ ಉದ್ಯಮದ ಚೇತರಿಕೆಗೆ ವಿಶೇಷ ಕ್ಲಸ್ಟರ್ ನಿರ್ಮಾಣ ಅಗತ್ಯವಿದೆ. ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು, ಬೊಂಬೆ ಉದ್ಯಮದ ಕುಶಲಕರ್ಮಿಗಳ ರಕ್ಷಣೆ.

2.ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅನುದಾನ ಕಲ್ಪಿಸಿ.

3. ಹೈನುಗಾರಿಕೆಗಾಗಿ ಪಶು ಆಹಾರ ಘಟಕ, ಪಶುಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ.

4.ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಟರ್ಮಿನಲ್ ಮಾರುಕಟ್ಟೆ ಸ್ಥಾಪನೆ.

ಬಾಕ್ಸ್‌...............

ಮಾಗಡಿ ಜನರ ನಿರೀಕ್ಷೆಗಳೇನು..?

1. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ. ಬೈರಮಂಗಲ ಭಾಗದ ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವುದು.

2.ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ, ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ಕಾಮಗಾರಿ ಆರಂಭಿಸುವುದು. ವೀರಾಪುರ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ತ್ವರಿಗತಗತಿಯಲ್ಲಿ ಪೂರ್ಣಗೊಳಿಸುವುದು,

3.ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜು ಸ್ಥಾಪನೆ. ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪನೆ.

4.ಮಂಚನಬೆಲೆ ಜಲಾಶಯದ ಬಳಿ ಕೆಆರ್ ಎಸ್ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಅನುದಾನ ಬಿಡುಗಡೆ. ಸಾವನದುರ್ಗ ಬೆಟ್ಟಕ್ಕೆ ರೋಪ್ ವೇ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸುವುದು.

ಬಾಕ್ಸ್‌............

ಕನಕಪುರ ಜನರ ನಿರೀಕ್ಷೆಗಳೇನು ?

1.ಮೇಕೆದಾಟು ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಪಕ್ಷಕ್ಕೀಗ ಕಾವೇರಿ ನದಿಗೆ ಮೆಕೆದಾಟು ಬಳಿ ಅಡ್ಡಲಾಗಿ ಜಲಾಶಯ ನಿರ್ಮಿಸುವ ಸವಾಲು ಇದೆ. ಏತ ನೀರಾವರಿಯ ಮೂಲಕ ತಾಲೂಕಿನಲ್ಲಿನ ಕೆರೆಗಳನ್ನು ತುಂಬಿಸುವುದು.

2. ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಗಮನ ಹರಿಸಬೇಕಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಕಲರಣೆ ಒದಗಿಸುವುದು.

3.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಮಂಜೂರಾದ ಬೆಂಗಳೂರಿನಿಂದ ಕನಕಪುರ - ಚಾಮರಾಜನಗರ ರೈಲ್ವೆ ಮಾರ್ಗದ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು.

4.ಕನಕಪುರ ತಾಲೂಕಿನಲ್ಲಿ ರೇಷ್ಮೆ ಟೆಕ್ನೊ ಪಾರ್ಕ್ ನಿರ್ಮಿಸಿ ರೇಷ್ಮೆಗೆ ಉತ್ತೇಜನ ನೀಡುವುದು.

ಬಾಕ್ಸ್‌..............

ಹಾರೋಹಳ್ಳಿ ಜನರ ನಿರೀಕ್ಷೆಗಳೇನು ?

1.ಹಾರೋಹಳ್ಳಿ ಹೊಸ ತಾಲೂಕಾಗಿದ್ದು, ತಾಲೂಕು ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಘೋಷಿಸಿ.

2. ತಾಲೂಕು ಅಭಿವೃದ್ಧಿಗೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಆದಷ್ಟು ಶೀಘ್ರವಾಗಿ ಅಧಿಕಾರಿಗಳ ನೇಮಿಸಬೇಕು.

3.ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗ್ನಿಶಾಮಕ ಠಾಣೆ ಮಂಜೂರು, ಸುಸಜ್ಜಿತ ಬಸ್ ನಿಲ್ದಾಣ, ಹೈಟೆಕ್ ಆಸ್ಪತ್ರೆ , ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಬೇಕು.

4.ಹಾರೋಹಳ್ಳಿ ಹೃದಯ ಭಾಗದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಪಟ್ಟಣದ ಎಲ್ಲ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಯೋಜನೆ ರೂಪಿಸುವುದು. ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು. ಐಟಿಐ ಕಾಲೇಜಿಗೆ ಕಟ್ಟಡ ನಿರ್ಮಾಣ, ಮೂಲಸೌಲಭ್ಯ ಕಲ್ಪಿಸುವುದು.

6ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಜಿಲ್ಲೆಯ ನಕ್ಷೆ.