ಕೇಳಿದ್ದು ಕೋಡೋದಿಲ್ಲ, ಕೊಟ್ಟಿದ್ದು ಉಳಿಸಿಕೊಂಡಿಲ್ಲ

| Published : Mar 07 2025, 12:45 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಗೆ ಕಿರು ವಿಮಾನ ನಿಲ್ದಾಣ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ, ಕಾಫಿಗೆ ಅಂತಾರಾಷ್ಟ್ರೀಯ ಬ್ರಾಂಡ್‌, ಟೆಕ್ಸ್‌ಟೈಲ್‌, ಸ್ಪೈಸ್ ಪಾರ್ಕ್‌ ಹಾಗೂ ವಿಜ್ಞಾನ ಕೇಂದ್ರ ನಿರ್ಮಾಣ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯನ್ನು ಕಳೆದ ಎರಡು ದಶಕ ಗಳಿಂದ ಪ್ರತಿ ಬಜೆಟ್‌ನಲ್ಲೂ ನಿರೀಕ್ಷಿಸಲಾಗಿದೆ.

- ರಾಜ್ಯ ಬಜೆಟ್‌ನಲ್ಲಿ ಕೊಟ್ಟರೂ ಜಾರಿಯಾಗೋದಿಲ್ಲ, ಸಂಪ್ರದಾಯವಾಗಿರೋ ನಿರೀಕ್ಷೆ,

ಆರ್‌. ತಾರಾನಾಥ್‌ ಅಟೋಕರ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಗೆ ಕಿರು ವಿಮಾನ ನಿಲ್ದಾಣ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ, ಕಾಫಿಗೆ ಅಂತಾರಾಷ್ಟ್ರೀಯ ಬ್ರಾಂಡ್‌, ಟೆಕ್ಸ್‌ಟೈಲ್‌, ಸ್ಪೈಸ್ ಪಾರ್ಕ್‌ ಹಾಗೂ ವಿಜ್ಞಾನ ಕೇಂದ್ರ ನಿರ್ಮಾಣ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯನ್ನು ಕಳೆದ ಎರಡು ದಶಕ ಗಳಿಂದ ಪ್ರತಿ ಬಜೆಟ್‌ನಲ್ಲೂ ನಿರೀಕ್ಷಿಸಲಾಗಿದೆ.

ಆದರೆ, ಇವುಗಳಲ್ಲಿ ಕೆಲವು ಘೋಷಣೆಯಾಗಿದ್ದರೆ ಮತ್ತೆ ಕೆಲವು ಘೋಷಣೆ ಆಗಬೇಕಾಗಿದೆ. ದುರ್ದೈವದ ಸಂಗತಿ ಎಂದರೆ, ಘೋಷಣೆಯಾಗಿದ್ದರೂ ಕೆಲವು ಕಾರ್ಯರೂಪಕ್ಕೇ ಬಂದಿಲ್ಲ.

ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಜಿಲ್ಲೆಯ ಅತಿರಥ ಮಹಾರಥರಂತಹ ರಾಜಕಾರಣಿಗಳು ಇದ್ದರೂ ಚಿಕ್ಕಮಗಳೂರಿಗೆ ಬಜೆಟ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಾತಿನಿಧ್ಯ ಸಿಗದೆ ಇರುವುದು ಈ ಜಿಲ್ಲೆಯ ದುರಂತ.ಕಿರು ವಿಮಾನ ನಿಲ್ದಾಣ:

ರಾಜ್ಯದ ಪ್ರವಾಸಿ ತಾಣಗಳ ಪ್ರಮುಖ ಸಾಲಿನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರಿಗೆ ಪ್ರತಿ ವರ್ಷ ವಿದೇಶಿಗರು ಸೆರಿದಂತೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. 2023-24 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದಂತೆ ಕಿರು ವಿಮಾನ ನಿಲ್ದಾಣವನ್ನು ಗೌಡನಹಳ್ಳಿ ರಸ್ತೆಯಲ್ಲಿ ಚಾಲನೆ ನೀಡಲಾಗಿದೆ. 1,200 ಮೀಟರ್‌ ರನ್‌ ವೇ ನಿರ್ಮಿಸಬೇಕಾಗಿದೆ. ಇದಕ್ಕೆ ಅವಶ್ಯಕತೆ ಇರುವ 140 ಎಕರೆ ಜಾಗಕ್ಕೆ ಸದ್ಯ ಇರುವ ಸರ್ಕಾರಿ ಭೂಮಿ ಜತೆಗೆ 19 ಎಕರೆ ಪ್ರದೇಶವನ್ನು ರೈತರಿಂದ ಸ್ವಾಧೀನ ಪಡಿಸಬೇಕಾಗಿದೆ. ಉಳಿದ ₹24 ಕೋಟಿ ಅವಶ್ಯಕತೆ ಇದೆ. ಆದರೆ, ಜಿಲ್ಲಾಡಳಿತಕ್ಕೆ ಸರ್ಕಾರ ₹7 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಇನ್ನುಳಿದ ಹಣ ಬಿಡುಗಡೆಯಾಗಬೇಕಾಗಿದೆ. ಹಾಗಾಗಿ ಈ ಕೆಲಸ ನೆನೆಗುದಿಗೆ ಬಿದ್ದಿದೆ.ಪ್ರತ್ಯೇಕ ಹಾಲು ಒಕ್ಕೂಟ:

ಜಿಲ್ಲೆಯ ಸಾವಿರಾರು ಮಂದಿ ರೈತರು ಹೈನುಗಾರಿಕೆಯನ್ನೇ ಅವಲಂಭಿಸಿದ್ದಾರೆ. ಆದರೆ, ಶಿವಮೊಗ್ಗ ಹಾಗೂ ಹಾಸನ ಹಾಲು ಒಕ್ಕೂಟಕ್ಕೆ ಇಲ್ಲಿನ ಹಾಲು ಹೋಗುತ್ತಿದೆ. ಹಾಗಾಗಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿನೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಇಚ್ಛೆ, ರೈತರ ಬೇಡಿಕೆಯೂ ಆಗಿದೆ. ಇದಕ್ಕೆ ಹಿಂದಿನ ಯಾವುದೇ ಸರ್ಕಾರ ಸ್ಪಂದಿಸಿಲ್ಲ. ಈ ಬಾರಿಯೂ ಕೂಡ ಜಿಲ್ಲೆಯ ನಿರೀಕ್ಷೆಗಳ ಸಾಲಿನಲ್ಲಿದೆ.ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ:

ಚಿಕ್ಕಮಗಳೂರು ಪ್ರಾಕೃತಿಕವಾಗಿ ಸಂಪದ್ಭರಿತ ಜಿಲ್ಲೆ. ಹೀಗಾಗಿಯೇ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಬರೋಬ್ಬರಿ 80 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿ, ಮಲೆನಾಡು ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಲ್ಲಿ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂಬುದು ಕಾಫಿನಾಡಿನ ಜನರ ಒತ್ತಾಯವಾಗಿದೆ.

ಈ ಹಿಂದೆ ಮುಳ್ಳಯ್ಯನಗಿರಿಯಲ್ಲಿ ಕೇಬಲ್ ಕಾರು ಅಳವಡಿಕೆ ಯೋಜನೆಗೆ ಪರಿಸರವಾದಿಗಳು ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಗಿತವಾಗಿತ್ತು. ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮೂಲಕ ಕಾಫಿನಾಡಿನ ಆರ್ಥಿಕ ಪ್ರಗತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.ಕಾಫಿ ಬ್ರಾಂಡ್: ರಾಜ್ಯ ಸರ್ಕಾರ ಮೊದಲ ಬಾರಿಗೆ 2023-24 ನೇ ಸಾಲಿನ ಬಜೆಟ್‌ನಲ್ಲಿ ಕಾಫಿಯನ್ನು ಮೌಲ್ಯವರ್ಧಿಸಿ ಬ್ರಾಂಡ್ ಮಾಡುವ ಪ್ರಸ್ತಾಪ ಅಲ್ಲೇ ಉಳಿದು ಹೋಗಿದೆ. ಅನನ್ಯವಾದ ರುಚಿ ಮತ್ತು ಕಂಪು ಹೊಂದಿರುವ ಚಿಕ್ಕಮಗಳೂರು ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯ ಜಿ.ಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮಾಡಲಾಗುವುದು ಎಂದು ಹೇಳಲಾಗಿತ್ತು.

ಪಶ್ಚಿಮಘಟ್ಟದ ಸಾಲಿನ ಬೆಟ್ಟಗಳಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಮರಗಳ ನೆರಳಿನಲ್ಲಿ ಈ ಹವಾಮಾನದಲ್ಲಿ ಬೆಳೆದು, ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿ ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಹೆಚ್ಚಿದೆ. ಈ ಕಾಫಿಯನ್ನು ಇನ್ನಷ್ಟು ಮೌಲ್ಯವರ್ಧಿಸಿ ಬ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. -- ಬಾಕ್ಸ್‌---ಘೋಷಿಸಿದ್ದು 4, ಕಾರ್ಯರೂಪಕ್ಕೆ ಬಂದಿದ್ದು 2ಚಿಕ್ಕಮಗಳೂರು: ಕಳೆದ 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಘೋಷಣೆ ಮಾಡಿದ್ದ ನಾಲ್ಕು ಕಾರ್ಯಕ್ರಮಗಳಲ್ಲಿ ಜಾರಿಗೆ ಬಂದಿದ್ದು ಎರಡು ಮಾತ್ರ.

ಜಿಲ್ಲೆಯಲ್ಲಿ ಸ್ಪೈಸ್‌ ಮಾರುಕಟ್ಟೆ ಅಭಿವೃದ್ಧಿ, ಶೃಂಗೇರಿ ತಾಲೂಕು ಕೇಂದ್ರದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ, ಸಾರ್ವ ಜನಿಕ ಆರೋಗ್ಯ ಪ್ರಯೋಗಾಲಯ ನಿರ್ಮಾಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ. ಅದರಲ್ಲಿ ಸ್ಪೈಸ್ ಮಾರುಕಟ್ಟೆ ಅಭಿವೃದ್ಧಿಗೆ ಈವರೆಗೆ ಯಾವುದೇ ಪ್ರಯತ್ನ ಆಗಿಲ್ಲ. ಶೃಂಗೇರಿಯಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಇದ್ದ ಜಾಗದ ವಿವಾದ ಬಗೆಹರಿದು ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ನಬಾರ್ಡ್‌ ಈ ಕಾಮಗಾರಿಗೆ ₹5 ಕೋಟಿ ಬಿಡುಗಡೆ ಮಾಡಿದೆ. ಮೂಡಿಗೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಸೆಂಟ್ರಲ್‌ ಲ್ಯಾಬ್‌ಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

2014ರ ವರ್ಷದಲ್ಲೇ ಮೊದಲ ಬಾರಿಗೆ ಘೋಷಣೆಯಾಗಿದ್ದ ವಿಜ್ಞಾನ ಕೇಂದ್ರ ಸ್ಥಾಪನೆ ಕಳೆದ ಬಜೆಟ್‌ನಲ್ಲಿ ಮರು ಘೋಷಣೆ ಯಾಗಿತ್ತು. ಕೇಂದ್ರ ಸ್ಥಾಪನೆಗೆ ಗುರುತು ಮಾಡಿದ್ದ ಜಾಗ ಡೀಮ್ಡ್‌ ಫಾರೆಸ್ಟ್‌ ಆಗಿದ್ದರಿಂದ ಮೊದಲ ಹಂತದಲ್ಲೇ ಇದಕ್ಕೆ ತೊಡಕಾದರೂ ಗೊಂದಲ ಬಗೆಹರಿದು ಕಾಮಗಾರಿ ಆರಂಭಿಸಬೇಕಿದ್ದ ಹಂತದಲ್ಲಿ ರಾಜಕೀಯ ಪಕ್ಷಗಳ ಸ್ವಪ್ರತಿಷ್ಟೆ ಯಿಂದ ಈ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಪಾಲು ಅನುದಾನದಲ್ಲಿ ಈ ಕಾಮಗಾರಿ ಆಗ ಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳ ನಾಯಕರು ಇಚ್ಛಾಶಕ್ತಿ ತೋರದೆಗೆ ಬಜೆಟ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿವೆ. ಈ ಬಾರಿಯೂ ಕೂಡ ಹೀಗೆ ಆಗದಿರಲಿ ಎಂಬುದೆ ಎಲ್ಲರ ಆಶಯ.

6 ಕೆಸಿಕೆಎಂ 1ಚಿಕ್ಕಮಗಳೂರಿನಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತು ಮಾಡಿರುವ ಪ್ರದೇಶ.

-- 6 ಕೆಸಿಕೆಎಂ 2 - 3ಚಿಕ್ಕಮಗಳೂರಿನ ಗಿರಿ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿರುವ ಪ್ರವಾಸಿಗರ ಕಾರುಗಳು.

--- 6 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟದ ಸಾಲುಗಳು.