ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಏ. ೨೪ ಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ಇಷ್ಟು ದಿನ ನಾನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದು, ನನ್ನ ಕ್ಷೇತ್ರ ವ್ಯಾಪ್ತಿಯ ಅನೇಕ ಅಭಿವೃದ್ಧಿಯ ಪ್ರಸ್ತಾಪಗಳನ್ನು ಸಲ್ಲಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.ಅವರು ಭಾನುವಾರ ಪಟ್ಟಣ ಪಂಚಾಯಿತಿಯ ಮುಖ್ಯಮಂತ್ರಿ ನಗರೋತ್ಥಾನ ೪ ರ ಹಂತದ ೧೧೩.೩೦ ಲಕ್ಷ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಪಟ್ಟಣದ ೨೪*೭ ನಿರಂತರ ಕುಡಿಯುವ ನೀರಿಗೆ ೨೦ ಕೋಟಿ ರು, ಒಳಚರಂಡಿಗೆ ೪೬ ಕೋಟಿ ರು.ಗಳ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಸಲ್ಲಿಸಲಾಗುವುದು. ಅಲ್ಲದೆ ಇಲ್ಲಿ ಖಾಲಿ ನಿವೇಶನಗಳ ಸಮಸ್ಯೆ ಇದ್ದು ಹೊಸ ನಿವೇಶನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಹಿಂದೆ ಬಂದಿದ್ದ ೧೦೦ ನಿವೇಶನಗಳು ವಾಪಸ್ಸಾಗಿತ್ತು, ಅಲ್ಲಿಂದ ಇಲ್ಲಿವರೆಗೆ ಇನ್ನೂ ನಿವೇಶನಗಳು ಬಂದಿಲ್ಲ ಇದನ್ನು ತರಲು ಶ್ರಮಿಸಲಾಗುವುದು. ಪೌರಾಡಳಿತ ಇಲಾಖೆಯಲ್ಲಿ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡುವಂತೆ ನಾನು ಸದನದಲ್ಲಿ ಪ್ರಶ್ನಿಸಿದ್ದೆ, ಈಗ ರಾಜ್ಯಾದ್ಯಂತ ೧೧೦೦ ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದಾಗ ಬೈಪಾಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು, ಆಗ ಊರೊಳಗಿನ ರಸ್ತೆಗಳನ್ನು ಹಾಗೆ ಬಿಡಲಾಗಿದೆ. ಇದು ಕೆಟ್ಟು ಹೋಗಿದ್ದು ಇದರ ದುರಸ್ತಿಗೆ ನಮ್ಮ ಸಂಸದರಾದ ಸುನೀಲ್ ಬೋಸ್ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಚಾಮರಾಜನಗರ ಗಡಿ ಭಾಗದಿಂದ ಇಂತಹ ಎಲ್ಲಾ ರಸ್ತೆಗಳ ಅಭಿವೃದ್ಧಿಗೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ನಗರೋತ್ಥಾನ ಯೋಜನೆಯಡಿಯಲ್ಲಿ ಯಳಂದೂರು ಪಪಂಗೆ ಸೇರಿದ ನೀರು ಶುದ್ಧೀಕರಣ ಘಟಕದ ಸುತ್ತುಗೋಡೆ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿಗೆ ೪೫ ಲಕ್ಷ ರು. ೧ ನೇ ವಾರ್ಡಿನ ಸೊಪ್ಪಿನ ಕೇರಿ ಬೀದಿಯ ಶೌಚಗೃಹ ನಿರ್ಮಾಣ, ೭ ನೇ ವಾರ್ಡಿನ ಪರಿಶಿಷ್ಟ ಪಂಗಡದ ೨ ಸಮುದಾಯ ಭವನಗಳ ಮುಂದುವರೆದ ಕಾಮಗಾರಿಗೆ ೧೪.೧೮ ಲಕ್ಷ ರು, ಮೂರು ಪಾರ್ಕ್‌ಗಳ ಅಭಿವೃದ್ಧಿಗೆ ೨೫ ಲಕ್ಷ ರು. ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳ ಸರ್ಕಾರಿ ಶಾಲೆಗಳಲ್ಲಿ ವಿಕಲಚೇತನ ಸ್ನೇಹಿ ರ್‍ಯಾಂಪ್ ನಿರ್ಮಾಣ, ರೈಲಿಂಗ್ಸ್‌ಗೆ ೧೦.೬೩ ಲಕ್ಷ ರು. ೧೧ ನೇ ವಾರ್ಡಿನ ಅಂಗನವಾಡಿ ಹಾಗೂ ಸಮೂಹ ಶೌಚಗೃಹ ನಿರ್ಮಾಣಕ್ಕೆ ೧೮.೪೯ ಲಕ್ಷ ರು. ಒಟ್ಟು ೧೧೩.೩೦ ಲಕ್ಷ ರು.ಗಳ ಕಾಮಗಾರಿಗಳು ನಡೆಯಲಿದ್ದು, ಇದನ್ನು ಆದಷ್ಟು ಬೇಗ ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.ಪಪಂ ಸದಸ್ಯ ವೈ.ಜಿ. ರಂಗನಾಥ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮಾತನಾಡಿದರು. ಪಪಂ ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ರವಿ, ಸುಶೀಲಾ ಪ್ರಕಾಶ್, ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ನಾಗೇಂದ್ರ, ಮುಖಂಡರಾದ ಮಲ್ಲು, ನಿಂಗರಾಜು, ಪ್ರಕಾಶ್, ಜಮೀರ್ ಸೇರಿದಂತೆ ಅನೇಕರು ಇದ್ದರು.