ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಬೊಕ್ಕಸ ಖಾಲಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಕೌಟಿಲ್ಯ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಬೊಕ್ಕಸ ಖಾಲಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಕೌಟಿಲ್ಯ ಆರೋಪಿಸಿದರು.

ಶಹಾಪುರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಮಟ್ಟದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಿಗಮ-ಮಂಡಳಿಗಳಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ವರದಿ ಜಾರಿಗೆ ತಾರದೆ ಕಾಂಗ್ರೆಸ್ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿವಿಧ ಹಿಂದುಳಿದ ಹಾಗೂ ಕಾಯಕ ಸಮುದಾಯಗಳಿಗೆ ನಿಗಮ-ಮಂಡಳಿಗಳನ್ನು ರಚಿಸಿ ಅನುದಾನ ಒದಗಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಹಲವು ನಿಗಮಗಳನ್ನು ಸ್ಥಾಪಿಸಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿತ್ತು. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಣ್ಣ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಬಿಜೆಪಿ ಆದ್ಯತೆ ನೀಡುತ್ತಿದೆ ಎಂದರು.

ಕಾಯಕ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಹಿಂದುಳಿದ ವರ್ಗಗಳ ಸಬಲೀಕರಣವೇ ಬಿಜೆಪಿ ಗುರಿ. ಸಣ್ಣ ಸಮುದಾಯಗಳನ್ನು ಸಂಘಟಿಸಿ ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಬಸವಣ್ಣನ ನಾಡು ಬೀದರ್‌ನಿಂದ ಕಾಯಕ ಸಮುದಾಯಗಳ ಸಂಘಟನೆಗೆ ಹೊಸ ಕ್ರಾಂತಿಯ ಚಾಲನೆ ನೀಡಲಾಗಿದೆ. ಅಕ್ಕಸಾಲಿಗ, ನೇಕಾರ, ಸಿಂಪಿಗೆ, ಮಡಿವಾಳ, ಸವಿತಾ, ಕಬ್ಬಲಿಗ ಸಹಿತ ಅನೇಕ ಸಣ್ಣ ಸಮುದಾಯಗಳು ಇಂದಿಗೂ ಭೂಮಿ, ನಿವೇಶನ ಹಾಗೂ ಸಮರ್ಪಕ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಇಂತಹ ಸಮುದಾಯಗಳ ಹಕ್ಕುಗಳಿಗಾಗಿ ಸಂಘಟಿತವಾಗಿ ಧ್ವನಿ ಎತ್ತಬೇಕಿದೆ ಎಂದು ಆರ್. ರಘು ಕೌಟಿಲ್ಯ ಹೇಳಿದರು.

ಸಣ್ಣ ಸಮುದಾಯಗಳ ನೊಂದವರ ಧ್ವನಿಯಾಗುವ ನಿಟ್ಟಿನಲ್ಲಿ ನನ್ನನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುದ್ರಾ, ಕೌಶಲ್ಯಾಭಿವೃದ್ಧಿ ಸಹಿತ ವಿವಿಧ ಯೋಜನೆಗಳ ಮೂಲಕ ಯುವ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ ಎಂದರು.

ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, 2028ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಯಾದಗಿರಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಮಾಗನೂರು, ರಾಚನಗೌಡ ಮುದ್ನಾಳ್ ಮಾತನಾಡಿದರು. ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಂದಕೂರು ಪ್ರಸ್ತಾವನೆಗೈದರು. ಮುಖಂಡರಾದ ಸಿದ್ದಣ್ಣಗೌಡ ಕಾಡಂನೂರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ನಗರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಯಾಳಗಿ ಉಪಸ್ಥಿತರಿದ್ದರು.

-----ಫೋಟೊ-----

4ವೈಡಿಆರ್‌8

ಶಹಾಪುರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಮಟ್ಟದ ವಿಶೇಷ ಸಭೆಯಲ್ಲಿ ಎಂಎಲ್‌ಸಿ ಆರ್. ರಘು ಕೌಟಿಲ್ಯ ಮಾತನಾಡಿದರು.