ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ಸೆ.8ರಂದು ಚಿತ್ರದುರ್ಗ ಮುರುಘಾಮಠದ ಅನುಭವ ಮಂಟಪದಲ್ಲಿ ಪತ್ರಿಕಾ ವಿತರಕರ 4ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಶಂಭುಲಿಂಗ ತಿಳಿಸಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಸಮ್ಮೇಳನ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಬಾಕರ್, ಜಿಲ್ಲೆಯ ಶಾಸಕರು, ನಿಗಮ ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.
ಸರ್ಕಾರ ಪತ್ರಿಕಾ ರಂಗವನ್ನು 4ನೇ ಅಂಗ ಎಂದು ಗುರುತಿಸಿದೆ. ಆದರೆ ಮನೆ, ಮನೆಗೆ ಪತ್ರಿಕೆಗಳನ್ನು ವಿತರಣೆ ಮಾಡುವವರನ್ನು ನಿರ್ಲಕ್ಷ ಮಾಡಿದೆ. ಯಾವುದೇ ರೀತಿಯ ಸೌಲಭ್ಯಗಳು ವಿತರಕರಿಗೆ ಸಿಕ್ಕಿಲ್ಲ. ಕೋವಿಡ್ ಸಮಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದು, ಹಲವು ವಿತರಕರನ್ನು ಕಳೆದು ಕೊಳ್ಳಬೇಕಾಯಿತು. ಒಕ್ಕೂಟ ರಚನೆ ಮಾಡುವುದರ ಮೂಲಕ ನಮ್ಮ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮಾಡಲಾಗುತ್ತಿದೆ. ಈಗ ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.ತುಮಕೂರಲ್ಲಿ 3ನೇ ಸಮ್ಮೇಳನ ಮಾಡುವಾಗ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರ ಮೇರೆಗೆ ಈ ಬಾರಿ ನಮ್ಮವರು ಒಬ್ಬರಿಗೆ ಪ್ರಶಸ್ತಿ ಕೊಡಲಾಗಿದೆ. ಇದೇ ರೀತಿ ಪತ್ರಿಕಾ ವಿತರಕರ ಕ್ಷೇಮಾಭೀವೃದ್ಧಿಗಾಗಿ ಸರ್ಕಾರ 10 ಕೋಟಿ ರು. ಮೀಸಲಿಡುವಂತೆ ಸಮ್ಮೇಳನದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿತರಕರ ಸಂಘದ ಚಳ್ಳಕೆರೆ ತಾಲೂಕು ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಸಂಘದ ಕುಬೇಂದ್ರಪ್ಪ, ಮೊಳಕಾಲ್ಮೂರಿನ ಮಲ್ಲಿಕಾರ್ಜುನ್, ಹಿರಿಯೂರಿನ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ನಾದೂರು ಇದ್ದರು.ಮೂರು ಸಾವಿರ ಜನ ಭಾಗವಹಿಸುವ ನಿರೀಕ್ಷೆ : ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರು ಇದ್ದಾರೆ, ಇದರಲ್ಲಿ ಬೆಂಗಳೂರಿನಲ್ಲಿಯೇ 120 ಸ್ಥಳಗಳಲ್ಲಿ ಸುಮಾರು 6,500 ಜನ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ. ಒಕ್ಕೂಟದಲ್ಲಿ 3,500 ಜನ ಸದಸ್ಯರಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಸಂಖ್ಯೆ 500ರಷ್ಟಿದೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 3 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಂಭುಲಿಂಗ ಹೇಳಿದರು.