ರಾಜ್ಯ ಕಾಂಗ್ರೆಸ್‌ ದಿವಾಳಿ: ಸುನೀಲಕುಮಾರ

| Published : May 03 2024, 01:04 AM IST

ಸಾರಾಂಶ

ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ನರೇಂದ್ರ ಮೋದಿ ಸಾಕಷ್ಟು ಕ್ರಮ ವಹಿಸಿದ್ದಾರೆ. ಅವರ ಕೈ ಬಲಪಡಿಸಲು ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲಕುಮಾರ ವಿನಂತಿಸಿದರು.

ಶಿರಸಿ: ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಪರೋಕ್ಷವಾಗಿ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡಿ, ಗ್ಯಾರಂಟಿಗೆ ನೀಡಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲಕುಮಾರ ತಿಳಿಸಿದರು.

ಬನವಾಸಿಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಸಿ, ಚುನಾವಣೆ ತಯಾರಿಯ ಕುರಿತು ಮಾಹಿತಿ ಪಡೆದು ಮಾತನಾಡಿ, ಮತದಾನಕ್ಕೆ ಮೂರು ದಿನಗಳಲ್ಲಿ ಬಾಕಿ ಉಳಿದಿದ್ದು, ೩ ದಿನ ಶ್ರಮವಹಿಸಿ, ಮತವಾಗಿ ಪರಿವರ್ತನೆ ಮಾಡಬೇಕು. ಬೂತ್‌ಗಳಲ್ಲಿ ಉತ್ತಮ ಕೆಲಸ ಮಾಡಿದರೆ ಮತಗಳ ಅಂತರ ಹೆಚ್ಚಾಗಲಿದ್ದು, ಪ್ರತಿಯೊಬ್ಬರೂ ತಮ್ಮ ಬೂತ್ ಗೆಲ್ಲಿಸಲು ಶ್ರಮ ವಹಿಸಬೇಕು. ವಿಶೇಷ ಪ್ರಯತ್ನ ಮಾಡಬೇಕಿದ್ದು, ಗ್ಯಾರಂಟಿಗೆ ಬಿಜೆಪಿ ವಿರೋಧಿ ಮಾಡಿಲ್ಲ.‌ ಅಭಿವೃದ್ಧಿ ಮಾಡಲು ಸಾಧ್ಯವಾಗದೇ, ಗ್ಯಾರಂಟಿ ನೀಡಿರುವುದನ್ನು ಕಾಂಗ್ರೆಸ್ ವೈಭವೀಕರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹನುಮಾನ ಚಾಲೀಸಾ ಪಠಿಸಿದರೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ. ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದರೆ ಕೊಲೆಯಾಗಿ ವಾಪಸ್‌ ಬರುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ನರೇಂದ್ರ ಮೋದಿ ಸಾಕಷ್ಟು ಕ್ರಮ ವಹಿಸಿದ್ದಾರೆ. ಅವರ ಕೈ ಬಲಪಡಿಸಲು ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ವಿನಂತಿಸಿದರು.

ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತ ಗೆಲ್ಲಬೇಕಾದ ಚುನಾವಣೆಯಾಗಿದ್ದು, ಚುನಾವಣೆಗೆ ಕೇವಲ ೩ ದಿನ ಬಾಕಿ ಇದ್ದು, ಕಳೆದ ೨ ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ. ಬನವಾಸಿ ಭಾಗದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣವಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ ಮತ್ತಿತರರು ಇದ್ದರು.ಪಕ್ಷ ಬದಲಾಯಿಸುವವರ ಬಗ್ಗೆ ಎಚ್ಚರ ವಹಿಸಬೇಕಿದೆ

ಶಿರಸಿ: ಪಕ್ಷ ಬದಲಾಯಿಸುವವರ ಬಗ್ಗೆ ಎಚ್ಚರ ವಹಿಸಬೇಕಿದೆ. ಪಕ್ಷದಲ್ಲಿ ಇರಲು ಇಷ್ಟವಿಲ್ಲವಾದರೆ ರಾಜೀನಾಮೆ ನೀಡಿ, ಧೈರ್ಯವಿದ್ದರೆ ಉಪಚುನಾವಣೆ ಎದುರಿಸಲಿ ಎಂದು ಶಾಸಕ ಶಿವರಾಮ ಹೆಬ್ಬಾರ್‌ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ. ಸುನೀಲಕುಮಾರ ತಿರುಗೇಟು ನೀಡಿದರು.ಬುಧವಾರ ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿಯು ಕಾರ್ಯಕರ್ತರ ಆಧಾರ ಪಕ್ಷವಾಗಿದ್ದು, ಬಿಜೆಪಿಯಿಂದ ಎಲ್ಲ ಅವಕಾಶ ಸಿಕ್ಕಿದೆ. ಲಾಭ ಪಡೆದುಕೊಂಡಿರುವುದು ಬಿಜೆಪಿಯಿಂದ. ಯಾಕೆ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.ಈ ಚುನಾವಣೆ ಭಾರತ ಭವಿಷ್ಯ ಹಾಗೂ ಬದುಕಿನ ನಡುವಿನ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಬೇಕಿರುವುದು ಅನಿವಾರ್ಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರಿಗೆ ಬಲ ನೀಡಲು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಬೆಂಬಲಿಸಬೇಕು ಎಂದರು.

ಚುನಾವಣೆ ಗೆಲ್ಲಲು ಸಾಧ್ಯವಾಗದೇ, ಬೆಳಗಾವಿ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಸಾವು ಬಯಸುತ್ತಿರುವುದು ದುರಂತ. ಮೋದಿಯವರು ಭಯೋತ್ಪಾದನೆಯನ್ನು ದೇಶದಿಂದ ಹೊಡೆದೊಡಿಸಿದ್ದಾರೆ. ದೇಶದ ಬಗ್ಗೆ ಪ್ರತಿಕ್ಷಣ ಚಿಂತಿಸುವ ಮತ್ತು ಅದರಂತೆ ನಡೆಯುತ್ತಿರುವ ಪ್ರಧಾನಿ ಕುರಿತು ಇಂತಹ ಭಾವನೆ ವ್ಯಕ್ತಪಡಿಸುತ್ತಿರುವುದು ಆಘಾತಕಾರಿ. ಚುನಾವಣೆ ಎದುರಿಸಲಾಗದೇ, ಪಲಾಯನ ಮಾಡುತ್ತಿರುವ ಅಭಿವೃದ್ಧಿ ವಿರೋಧಿ ಸರ್ಕಾರ ರಾಜ್ಯ ಹಾಗೂ ದೇಶದಿಂದ ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸೇರಿದಂತೆ ಮತ್ತಿತರರು ಇದ್ದರು.