ಸಾರಾಂಶ
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳ ಪರವಾದ ಅಲೆ ಸೃಷ್ಟಿಯಾಗಿದ್ದು, ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದು ಖಚಿತ. ಅದೇ ರೀತಿ ಮೋದಿ ಅವರ ಸಂಪುಟದಲ್ಲಿ ಕುಮಾರಸ್ವಾಮಿ ಸಚಿವರಾಗಬೇಕಾದರೆ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಆಶೀರ್ವದಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ಯಾರಂಟಿ ಹೆಸರಿನಲ್ಲಿ ಪ್ರತಿ ತಿಂಗಳು ಎರಡು ಸಾವಿರ ಪ್ರತಿ ಕುಟುಂಬಕ್ಕೆ ದೊರಕುತ್ತಿದ್ದು, ಪರೋಕ್ಷವಾಗಿ ಕುಟುಂಬವೊಂದರಿಂದ 10 ಸಾವಿರ ರು.ಗಳನ್ನು ಸರ್ಕಾರ ಕಸಿಯುತ್ತಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.ತಾಲೂಕಿನ ಕೊತ್ತತ್ತಿ ಹೋಬಳಿ 2ನೇ ವೃತ್ತದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಸವಾಡಿ ಗ್ರಾಮದಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಆರ್.ಟಿ.ಸಿ, ಮುದ್ರಾಂಕ ಶುಲ್ಕ, ಛಾಪಾಕಾಗದ, ಟಿಸಿ ಅಳವಡಿಕೆಗೆ ಅಧಿಕ ಹಣ ವಸೂಲಿ ಮಾಡಿ ಜನರನ್ನು ಶೋಷಣೆ ಮಾಡಲಾಗುತ್ತಿದ್ದು, ಶ್ರಮಿಕರು ಬಳಸುತ್ತಿರುವ ಮದ್ಯದ ಬೆಲೆ ಏರಿಕೆ ಮಾಡಿ, ತಾಯಂದಿರ ಹಣವನ್ನು ಗಂಡಸರಿಂದ ಕಸಿಯಲಾಗುತ್ತಿದೆ ಎಂದು ದೂರಿದರು.ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳ ಪರವಾದ ಅಲೆ ಸೃಷ್ಟಿಯಾಗಿದ್ದು, ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದು ಖಚಿತ. ಅದೇ ರೀತಿ ಮೋದಿ ಅವರ ಸಂಪುಟದಲ್ಲಿ ಕುಮಾರಸ್ವಾಮಿ ಸಚಿವರಾಗಬೇಕಾದರೆ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಜಿಲ್ಲೆ ರಾಷ್ಟ್ರದ ಗಮನ ಸೆಳೆದಿದೆ. ಮೋದಿಯವರು ಮರಳಿ ಪ್ರಧಾನಿ ಗದ್ದುಗೆ ಏರಲು ಮೈತ್ರಿ ಅಭ್ಯರ್ಥಿಯನ್ನು ಹೆಚ್ಚು ಬಹುಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.ಉಭಯ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಪ್ರತಿ ಮನೆಗೆ ತೆರಳಿ ಮತಯಾಚಿಸಬೇಕು. ಆ ಮೂಲಕ ಎನ್.ಡಿ.ಎ ಮೈತ್ರಿ ಕೂಟವನ್ನು ಬಲವರ್ಧನೆಗೊಳಿಸುವಂತೆ ತಿಳಿಸಿದಿರು.
ಗ್ರಾಮಕ್ಕೆ ಆಗಮಿಸಿದ ರವೀಂದ್ರ ಶ್ರೀಕಂಠಯ್ಯ ಹಾಗೂ ಡಾ.ಸಿದ್ದರಾಮಯ್ಯ ಅವರನ್ನು ಅಲಂಕೃತ ಎತ್ತಿನಗಾಡಿ ಮೆರವಣಿಗೆ ಮೂಲಕ ಗ್ರಾಮದೊಳಗೆ ಕರೆದೊಯ್ಯಲಾಯಿತು. ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಭಾಗಿಯಾಗಿದ್ದರು.ಗ್ರಾಮದ ದೇವಾಲಯದಲ್ಲಿ ಆಯೋಜನೆಗೊಂಡಿದ್ದ ಶ್ರೀರಾಮನವಮಿ ಪೂಜಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ಪ್ರಸನ್ನ, ಗ್ರಾ.ಪಂ.ಸದಸ್ಯರಾದ ಸೌಮ್ಯ, ಲಕ್ಷ್ಮಿ, ರವೀಶ್, ಬಸವರಾಜು, ಸಾಕಮ್ಮ, ಮುಖಂಡರಾದ ಶಾರದಮ್ಮ, ನಂದೀಶ್, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.